ಬುಧವಾರ, ಮೇ 30, 2012

ಇವತ್ತಿಗೂ ಅವನೇ...ಈಕ್ಷಣಕ್ಕೂ ಅವನೇ... ನಾಳೆಗೂ ಅವನೇ


ನನ್ನ ಪತ್ನಿ ನಿತ್ಯವೂ ನನಗೆ ಹೇಳುವ ಮಾತು" ನಿಮಗೆ ಏನೂ ಗೊತ್ತಾಗುಲ್ಲಾ, ನಿಮಗೆ ವ್ಯವಹಾರಜ್ಞಾನವೇ ಇಲ್ಲ"
"ಪರವಾಗಿಲ್ಲ. ಏನಾಯ್ತೀಗ?" ಅನ್ನೋದು ನನ್ನ ಮಾತು....ಯಾಕೆ  ನನ್ನ ಪತ್ನಿ ಹಾಗೆಲ್ಲಾ ಮಾತಾಡ್ತಾಳೆ ಅಂದ್ರೆ....ಮನೆ ಮುಂದೆ ತರಕಾರಿ ವ್ಯಾಪಾರ ಮಾಡುವವರಲ್ಲಿ, ಮನೆ ಕೆಲಸಗಾರರಲ್ಲಿ, ಶ್ರಮ ಜೀವಿಗಳೊಡನೆ ನಾನು ಚರ್ಚೆ ಮಾಡಲು ಹೋಗುಲ್ಲ. ಅವರು ಕೇಳಿದಷ್ಟು ಕೊಟ್ಟು ಬಿಡ್ತೀನಿ. " ನೀವು ದಾನ ಶೂರ ಕರ್ಣ" ಅಂತಾ ಹಂಗಿಸಬೇಡಿ. ನನಗೆ ಯಾವತ್ತಿನಿಂದ ಜೀವನಕ್ಕೆ ತೊಂದರೆ ಯಾಗಿಲ್ಲ, ಅಂದಿನಿಂದ ಹಣವನ್ನು ಉಳಿತಾಯಮಾಡಬೇಕೆಂಬ ಆಸೆ ಬಂದಿಲ್ಲ. ಆಗಾಗ ಯಾವ ಯಾವ ಕೆಲಸ ಮಹತ್ವ ಪಡೆಯುತ್ತವೋ ಅದನ್ನು ಹೇಗಾದರೂ ಮಾಡಿ ಯಶಸ್ವಿಯಾಗಿ ಮುಗಿಸಿದರೆ ಆಯ್ತು. ಮುಂದೆ ನೋಡಿ    ಕೊಳ್ಳೋಣ , ದೇವರಿದ್ದಾನೆ, ಎಂಬ ಭಾವನೆ. ನೋಡಿ ಆ ದೇವರು ಕಳೆದ 25 ವರ್ಷಗಳಿಂದ [ಎಂದಿನಿಂದ ನಾನು ಅವನನ್ನು ಹೊಣೆ ಮಾಡಿದೆ, ಅಂದಿನಿಂದ ಸಲೀಸಾಗಿ ನಡೆಸಿಕೊಂಡು     ಹೋಗುತ್ತಿದ್ದಾನೆ. ನಾಳೆಗೆ ಇಡುವ ಪ್ರಶ್ನೆ ಉದ್ಭಸಿಯೇ ಇಲ್ಲ. ನಾಳೆಗೆ ಅವನಿದ್ದಾನೆ......
ಎರಡು ಮನೆ ಕಟ್ಟುವ ಅವಕಾಶ ಒದಗಿ ಬಂತು. ಒಂದು ನಮ್ಮ ಹಳ್ಳಿಯಲ್ಲಿ . ಒಂದು ಹಾಸನದಲ್ಲಿ. ಆಗೆಲ್ಲಾ ಶ್ರಮಜೀವಿಗಳಿಗೆ ಉದಾರವಾಗಿಯೇ ನೀಡಿದೆ[ಹೀಗೆಂದು ಹೇಳಿಕೊಳ್ಳಬಾರದು, ಆದರೂ ವಿಚಾರ ಹಂಚಿಕೊಳ್ಳದಿದ್ದರೆ ಅದು ಬೇರೆಯವರ ವಿಮರ್ಶೆಗೆ ದಕ್ಕುವುದಿಲ್ಲವಲ್ಲ]
ಅಂದಹಾಗೆ ನಾನು ಯಾವುದನ್ನೂ ವ್ಯಾವಹಾರಿಕವಾಗಿ ನೋಡಲೇ ಇಲ್ಲ. ಶ್ರಮಜೀವಿಗಳಿಗೆ ಅವರ ಕೆಲಸಕ್ಕೆ ಸ್ವಲ್ಪ ಹೆಚ್ಚು ನೀಡಿದರೆ ಆ ಮೂಲಕವಾದರೂ ಅವರ ಯಾವುದೋ ಕಷ್ಟ ಕಾರ್ಪಣ್ಯಕ್ಕೆ ನೆರವಾದಂತೆ ಆಗುತ್ತದೆಂಬುದು ನನ್ನ ಭಾವನೆ. ಈ ಮಾತು ಬಂದಾಗ ಒಬ್ಬರು ತಿಳಿದವರು ನನಗೆ ಏನು ಹೇಳಿದರು ಗೊತ್ತೇ?.......ಬಿಕ್ಷೆಗೆ ಬಂದವನಿಗೆ ಉದಾರವಾಗಿ ನೀಡಿದರೆ ಅವನು ಶಂಖ ಜಾಗಟೆಯನ್ನು ನಿಮ್ಮ ಮನೆ ಬಾಗಿಲಲ್ಲೇ ನೇತುಹಾಕಿ ಆರಾಮವಾಗಿದ್ದು ಬಿಡುತ್ತಾನೆ! 
ಅದು ಅವರ ಭಾವನೆ. ನನ್ನ ಭಾವನೆ ಇದು. ಹುಟ್ಟುವಾಗ ಅತಿ ಬಡತನದಲ್ಲಿ ಬೆಂದ ನನಗೆ ಇಂದು ಭಗವಂತನು ಚೆನ್ನಾಗಿಯೇ ಕೊಟ್ಟಿದ್ದಾನೆಂಬ ಸಂತೋಷವಿದೆ. ನಾಳೆಗೆ ಯೋಚಿಸುವುದಿಲ್ಲ. ಇವತ್ತಿಗೂ ಅವನೇ...ಈಕ್ಷಣಕ್ಕೂ ಅವನೇ... ನಾಳೆಗೂ ಅವನೇ.

1 ಕಾಮೆಂಟ್‌:

  1. ದಾನ ಮಾಡುವಾಗ ಪಾತ್ರಾಪಾತ್ರರನ್ನು ಅರಿತು ಮಾಡಬೇಕೆಂದು ತಿಳಿದವರು ಹೇಳುತ್ತಾರೆ.ನಿಜವಾಗಿಯೂ ಶ್ರಮಜೀವಿಗಳು ಕೊಟ್ಟ ಹಣದಿಂದ ಉಪಯೋಗ ಪಡೆಯುವವರಾದರೆ ಪರವಾಗಿಲ್ಲ. ಅವರಲ್ಲಿ ಕೆಲವರು ಕುಡಿತದ ದಾಸರಾಗಿದ್ದರೆ ಕೊಡುವುದು ಉಚಿತವಲ್ಲ. ನಿಮಗೆ ಗೊತ್ತಿದೆ, ಸರಿಯಾಗೇ ಮಾಡುತ್ತಿರುವಿರಿ.

    ಪ್ರತ್ಯುತ್ತರಅಳಿಸಿ