ಇಂತವರನ್ನು ನೋಡಿ ಬದುಕುವುದನ್ನು ಕಲೀಬೇಕು.ಇಂದಿನ ಮಕ್ಕಳಿಗೆ ಅವರನ್ನು ನೋಡಿ ಕಲಿಯಲು ಈಗ ಅವರು ಇಲ್ಲ. ಇದ್ದಾಗ ನಮ್ಮೂರ ಸಾಮರಸ್ಯಕ್ಕಾಗಿ ಅವರು ಮಾಡಿದ ಪ್ರಯತ್ನವೆಲ್ಲಾ ವ್ಯರ್ಥವಾಯ್ತು. ಒಬ್ಬ ಹಿರಿಯರು ಯಾಕೆ ಹೇಳ್ತಾರೆ! ಅವರ ಅಂತರಂಗದ ತುಡಿತವೇನು? ಅನ್ನೋದು ನಮ್ಮೂರಿನ ಜನರಿಗೆ ಗೊತ್ತಾಗಲೇ ಇಲ್ಲ.ನನ್ನ ಮದುವೆ ಸಂದರ್ಭದಲ್ಲಿ ಎಲ್ಲರನ್ನೂ ಒಂದು ಮಾಡಬೇಕು ಅಂತಾ ಎಷ್ಟು ಪ್ರಯತ್ನ ಪಟ್ಟರು ಗೊತ್ತಾ? ಆದರೆ ಜನರು ಅವರ ಮಾತು ಕೇಳಲೇ ಇಲ್ಲ.
ಅಡಲ್ಟ್ ಕಂಠಿ..ಅಂದರೆ ಹಲವರಿಗೆ ಗೊತ್ತಾಗುತ್ತೆ. ವಯಸ್ಕರ ಶಿಕ್ಷಣ ಇಲಾಖೆಗೆ ಸಾಮಾನ್ಯ ನೌಕರನಾಗಿ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಯಾಗಿ ಉತ್ತಮವಾದ ಹೆಸರು ಮಾಡಿದವರು ಹೆಚ್.ಆರ್.ಶ್ರೀಕಂಠಯ್ಯನವರು.ಮೈಸೂರಿನಲ್ಲೇ ಬಹಳ ವರ್ಷ ಸೇವೆ. ಮೈಸೂರು ಕೃಷ್ಣಮೂರ್ತಿಪುರಮ್ ನಲ್ಲಿ ಈಗಲೂ ಅವರ ಹಲವಾರು ಒಡನಾಡಿಗಳಿದ್ದಾರೆ. ಹುಟ್ಟಿದ್ದು ಹರಿಹರಪುರವಾದರೂ ತಂದೆಯನ್ನು ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡು ಪಟ್ಟಣ ಸೇರಿದರು. ಕಷ್ಟ ಪಟ್ಟು ಮೇಲೆ ಬಂದರು. ವಯಸ್ಕರ ಶಿಕ್ಷಣ ಇಲಾಖೆಯಲ್ಲಿ ಸೇವೆ ಮಾಡಿ ಹೆಸರು ಮಾಡಿದರು. ನಮ್ಮ ಸೋದರತ್ತೆಯ ಮಗಳು ಪಾರ್ವತಿಯನ್ನು ಮದುವೆಯಾಗಿ ನಮ್ಮ ಮನೆಗೆ ಹತ್ತಿರವಾಗಿಬಿಟ್ಟರು. ನಮ್ಮ ಅಪ್ಪ -ಅಮ್ಮ ಇವರನ್ನೂ ಮತ್ತು ಪಾರ್ವತಿಯ ಮತ್ತೊಬ್ಬ ಅಕ್ಕ ಸೀತಾಲಕ್ಷ್ಮಿಯನ್ನು ನಮ್ಮ ಮನೆಯ ಹಿರಿಯ ಮಕ್ಕಳೆಂದು ಭಾವಿಸಿದ್ದರು. ಅಷ್ಟು ಅನ್ಯೋನ್ಯವಾಗಿದ್ದರು.
ಶ್ರೀಕಂಠಯ್ಯನವರಿಗೆ ಐದು ಜನ ಹೆಣ್ಣು ಮಕ್ಕಳು. ಒಬ್ಬ ಮಗ. ಐದೂ ಜನ ಅಳಿಯಂದಿರು ಮನೆಯ ಮಕ್ಕಳಂತೆ ಇದ್ದಾರೆ. ಎಲ್ಲರಿಗೂ ಇವರು ತಂದೆಯ ಸಮಾನರಾಗಿದ್ದರು. ಅಂದಿನ ಕಾಲದಲ್ಲಿ ಐದು ಜನ ಹೆಣ್ಣುಮಕ್ಕಳಿಗೆ ಮದುವೆ ಮಾಡುವುದೆಂದರೆ ಸುಲಭದ ಮಾತಲ್ಲ. ಆದರೆ ನಮ್ಮ ಕಂಠಿ ಮಾವ ಎಷ್ಟು ಚೆನ್ನಾಗಿ ಅವರ ಜವಾಬ್ದಾರಿ ನಿರ್ವಹಿಸಿಬಿಟ್ಟರೆಂದರೆ ಹೆಣ್ಣು ಮಕ್ಕಳು ಅಳಿಯಂದಿರು ಮತ್ತು ಮಗ ಸೊಸೆ ಇವರೊಡನೆ ಅವರ ಜೀವನ ಸ್ವರ್ಗದಂತಿತ್ತು.
ಒಂದು ಘಟನೆ ತಿಳಿಸಿ ಬಿಡುವೆ. ಇವರು ನಿವೃತ್ತರಾಗಿ ಮೈಸೂರಲ್ಲಿದ್ದರು. ಮಗನಿಗೆ ಬೆಂಗಳೂರಿನಲ್ಲಿ ಕೆಲಸವಾಯ್ತು. ಇವರು ಬೆಂಗಳೂರಿಗೆ ಶಿಫ್ಟ್ ಆಗಬೇಕಾಯ್ತು. ಬೆಂಗಳೂರಿನಲ್ಲಿದ್ದ ಇವರ ಹಿರಿಯ ಮಗಳು ವಸಂತ ಮೈಸೂರಿಗೆ ಬರಬೇಕಾಯ್ತು. [ ಕಾರಣ ಗೊತ್ತಿಲ್ಲ] ವಸಂತನ ಸ್ವಂತ ಮನೆ ಬೆಂಗಳೂರಿನಲ್ಲಿತ್ತು. ಕಂಠಿ ಮಾವನ ಸ್ವಂತಮನೆ ಮೈಸೂರಿನಲ್ಲಿ. ಇಬ್ಬರೂ ಅವರವರ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಈಗ ಇವರು ಬೆಂಗಳೂರಿಗೆ ಅವರು ಮೈಸೂರಿಗೆ ಶಿಫ್ಟ್ ಆಗಬೇಕಾಯ್ತಲ್ಲ. very simple. ಇಬ್ಬರೂ ತಮ್ಮ ತಮ್ಮ ಬಟ್ಟೆಯನ್ನು ಮಾತ್ರ ಸೂಟ್ ಕೇಸ್ ಗೆ ತುಂಬಿಕೊಂಡರು. ಇವರು ಅವರ ಮನೆಗೆ ಅವರು ಇವರ ಮನೆಗೆ ಶಿಫ್ಟ್ ಆಗಿ ಬಿಟ್ಟರು!!! ಅಲ್ಲಿದ್ದ ಸಾಮಾನು ಸರಂಜಾಮು ಅಲ್ಲೇ.ಇಲ್ಲಿದ್ದ ಸಾಮಾನು ಸರಂಜಾಮು ಇಲ್ಲೇ. ಈತರ ಮನೆ ಬದಲಿಸಿದ ಮತ್ತೊಂದು ಘಟನೆ ಇದ್ದರೆ ತಿಳಿಸ್ತೀರಾ?
ಯಾಕೋ ಇವತ್ತು ಅವರ ನೆನಪಾಯ್ತು. ಬರೆದು ಬಿಟ್ಟೆ.ಅಷ್ಟೆ.
ಈ ಘಟನೆಯನ್ನು ಫೇಸ್ ಬುಕ್ ನಲ್ಲಿ ಬರೆದಿದ್ದೆ. ಅದನ್ನು ಓದಿದ ನಾಗಮಣಿ ನನಗೆ ಫೋನ್ ಮಾಡಿದ್ಲು. ಶ್ರೀಧರಾ, ನಮ್ಮಪ್ಪನ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದು ಅದರಲ್ಲಿ ವಸಂತ ಮತ್ತು ಅಪ್ಪ ಮನೆಯನ್ನು ಬದಲಿಸಿಕೊಂಡಿದ್ದನ್ನು ಬರೆದಿದ್ದೀಯಲ್ಲಾ, ಅದಕ್ಕಿಂತ ವಿಚಿತ್ರವಾದ ಇನ್ನೊಂದು ಕಥೆ ಕೇಳು, ಅಂದ್ಲು. ಹೇಳಮ್ಮಾ ಅಂದೆ……
ನೋಡು ಶ್ರೀಧರ, ಆ ದಿನಗಳಲ್ಲಿ ನಾವು ಎಲ್ಲಾ ಕಡೆ ಸರ್ವೀಸ್ ಮಾಡಿ ಮೈಸೂರಿಗೆ ನಮ್ಮ ಮನೆಯವರಿಗೆ ವರ್ಗವಾಗಿತ್ತು. ಆ ಹೊತ್ತಿಗೆ ನನ್ನ ಎಲ್ಲಾ ಅಕ್ಕ ತಂಗಿಯರೂ ಮನೆ ಮಾಡಿಕೊಂಡಿದ್ದರು.ನಮಗೆ ಮಾತ್ರ ಸ್ವಂತ ಮನೆ ಇರಲಿಲ್ಲ. ಮೈಸೂರಲ್ಲಿ ವಾಸವಿದ್ದ ವಸಂತಳೂ ವಾಪಸ್ ಬೆಂಗಳೂರಿಗೆ ಹೋಗಿದ್ದಳು. ಮಂಜು ಬೆಂಗಳೂರಿನಲ್ಲಿ ಮನೆ ಕಟ್ಟಿದ್ದರಿಂದ ಅಪ್ಪ-ಅಮ್ಮ ಮಂಜು ಮನೆಯಲ್ಲಿದ್ದರು. ವಸಂತ ಅವಳ ಸ್ವಂತ ಮನೆಯಲ್ಲಿದ್ದಳು. ಸರಿ ಮೈಸೂರಿನ ನಮ್ಮ ಅಪ್ಪನ ಮನೆ ಖಾಲಿ ಇತ್ತು. ನಮ್ಮ ಅಪ್ಪ ಫೋನ್ ಮಾಡಿದರು “ ನಾಗು , ನಿನ್ನ ಯಜಮಾನರಿಗೆ ಮೈಸೂರಿಗೆ ವರ್ಗವಾಗಿದೆ. ನನ್ನ ಮನೆಯೂ ಖಾಲಿ ಇದೆ. ಮಕ್ಕಳೆಲ್ಲಾ ಮನೆ ಕಟ್ಟಿದ್ದಾಗಿದೆ. ಮೈಸೂರ ಮನೆಯಲ್ಲಿ ನೀವಿದ್ದು ಬಿಡಿ, ಫೋನ್ ನ್ನಲ್ಲಿ ಮಾತನಾಡಿ ನನಗೆ ಮೈಸೂರು ಮನೆಯನ್ನು ಗಿಫ್ಟ್ ಆಗಿ ಕೊಟ್ಟು ಬಿಟ್ಟರು ಕಣೋ!....[ಈ ಮಾತು ಹೇಳುವಾಗ ನಾಗು ಅಳುತ್ತಿದ್ದಳು]
ಕೆಲವು ವರ್ಷಗಳು ಮೈಸೂರಲ್ಲಿದ್ದೆವು. ಒಂದಿನ ಅಣ್ಣ ಫೋನ್ ಮಾಡಿ “ ಅಲ್ಲಾ ನಾಗು, ಮಹಾರಾಜನೇ ಈಗ ಮೈಸೂರು ಅರಮನೆಯಲ್ಲಿಲ್ಲ.ನೀನ್ಯಾಕೆ ಮೈಸೂರಲ್ಲಿದ್ದೀಯ. ಎಲ್ಲಾ ಮಕ್ಕಳೂ ಬೆಂಗಳೂರಿನಲ್ಲಿರುವಾಗ ನೀನು ಅಷ್ಟು ದೂರ!!!![ಮೈಸೂರು ಬೆಂಗಳೂರಿಗೆ ತುಂಬಾ ದೂರವಂತೆ!!!, ಕಂಠಿ ಮಾವಂಗೆ ಮಕ್ಕಳನ್ನು ಒಂದು ದಿನ ಬಿಟ್ಟು ಇರಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಮೈಸೂರು ಬಲು ದೂರ ಎನ್ನಿಸಿರಬೇಕು]
ಮೈಸೂರ ಮನೆಯನ್ನು ಮಾರಿಬಿಡು,ಬೆಂಗಳೂರಿಗೆ ಬಂದು ಬಿಡು. ಹಾಗೆ ಮಾಡಿದೆವು ಶ್ರೀಧರ. ಮೈಸೂರು ಮನೆ ಮಾರಿ ಜೊತೆಗೆ ಸ್ವಲ್ಪ ದುಡ್ಡು ಹಾಕಿ ಮನೆ ಕಟ್ಟಿದೆವು. ಮನೆ ಹೆಸರು ಏನಂತ ಗೊತ್ತಾ? “ ಶ್ರೀಪವನಸುಮ”
ಶ್ರೀ- ಶ್ರೀಕಂಠಯ್ಯ[ಅಪ್ಪ]
ಪ- ಪದ್ಮ[ ತಂಗಿ] ಪಾರ್ವತಿ-ತಾಯಿ
ವ- ವಸಂತ –ಅಕ್ಕ
ನ- ನಾಗಮಣಿ[ತಾನೇ]
ಸು- ಸುಶೀಲ[ಅಕ್ಕ]
ಮ- ಮಂಜು[ತಮ್ಮ]ಮಂಗಳ[ತಂಗಿ]
ಅಪ್ಪನ ಮನೆಯನ್ನು ಮಗಳಿಗೆ ಗಿಫ್ಟ್ ಅಂತಾ ಕೊಟ್ಟಾಗ ಯಾವ ಅಕ್ಕತಂಗಿಯರಾಗಲೀ, ತಮ್ಮನಾಗಲೀ ಚಕಾರ ಎತ್ತದೆ ಸಂತೋಷವಾಗಿ ಒಪ್ಪಿದ್ದರಿಂದ ಎಲ್ಲರ ಹೆಸರಿನಲ್ಲಿ “ಶ್ರೀಪವನಸುಮ” ನಿರ್ಮಣವಾಗಿ ಅದರಲ್ಲಿ ನಾಗಮಣಿ-ನಾರಾಯನಮೂರ್ತಿಯವರ ಕುಟುಂಬ ವಾಸವಾಗಿದೆ. ಇಂತಾ ಮತ್ತೊಂದು ಉಧಾಹರಣೆ?
|
ಶರೀರ ಸ್ಪಂಧಿಸದಿದ್ದರೇನು ನಡಿಯಮ್ಮಾ ಬರ್ತೀನಿ ಟೂರ್ ಹೋಗೋಣ! [ಕೊನೆಯ ದಿವಸಗಳು] |
|
ಕೊನೆಯ ದಿನಗಳಲ್ಲೂ ಮಕ್ಕಳನ್ನು ಸಂತೋಷ ಪಡಿಸುವ ಪರಿ! |
|
ಅಕ್ಕ ನರಸಮ್ಮ [ದೊಡ್ಡಪ್ಪನ ಮಗಳಿರಬಹುದು] ನನ್ನು ನೋಡುವ ಹಾಗಿದೆ ನಡೀರಿ ಕೊಣನೂರಿಗೆ ಹೋಗಿ ಬಂದು ಬಿಡೋಣ. ಕೂಡಲೇ ಮಕ್ಕಳು ರಡಿಯಾಗೇ ಬಿಟ್ಟರು.ಕೊಣನೂರಿನಲ್ಲಿ ಅಕ್ಕನೊಡನೆ. |
|
ಕೊಣನೂರಿನಲ್ಲಿ ಅಕ್ಕನೊಡನೆ. |
|
ಅಕ್ಕಾ, ಹೇಗಿದೀಯಾ? |
|
ಆ ದೇವರು ನಿನ್ನ ಸಂಸಾರವನ್ನು ಚೆನ್ನಾಗಿಟ್ಟಿರಲಿ ಕಣೋ.
|
ತುಂಬಾ ಸಂತೋಷವಾಗುತ್ತದೆ. ಎಲ್ಲಾ ಕುಟುಂಬಗಳಿಗೆ ಮಾದರಿ ಇವರುಗಳು!
ಪ್ರತ್ಯುತ್ತರಅಳಿಸಿಈ ಅಜ್ಜಿ ಯಾರು ಗೊತ್ತಾ? ವೇದಪಾಠಕ್ಕೆ ಬರ್ತಾಇದ್ರಲ್ಲಾ ಸುಮ [ಎರಡು ಮಕ್ಕಳೊಡನೆ] ಅವರ ಅಜ್ಜಿ
ಪ್ರತ್ಯುತ್ತರಅಳಿಸಿ