ಶನಿವಾರ, ನವೆಂಬರ್ 29, 2014

ಅದ್ಭುತ! ಅಭೂತ !! ಬಾಣಾವರದ ಸಂತ ಸಮಾವೇಶ


"ಸಾಧು-ಸಂತ ಸಮಾಗಮ" ಎಂಬ ಹೆಸರಿನಲ್ಲಿ ಹಾಸನಜಿಲ್ಲೆಯ ಒಂದು ಪುಟ್ಟ ಊರು ಬಾಣಾವರದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಆರಂಭದ ಮತ್ತು ಎರಡನೆಯ ದಿನದ ಕಾರ್ಯಕ್ರಮಗಳಿಗೆ ಪ್ರತ್ಯಕ್ಷದರ್ಶಿಯಾಗಿದ್ದರಿಂದ ಆ ಬಗ್ಗೆ ವೇದಸುಧೆಯ ಅಭಿಮಾನಿಗಳಿಗೆ ಒಂದಿಷ್ಟು ಮಾಹಿತಿ ಕೊಡುವುದಷ್ಟೇ ಈ ಲೇಖನದ ಉದ್ದೇಶ. ಇದು ಈ ಒಂದು ಬೃಹತ್ ಕಾರ್ಯಕ್ರಮದ ಪೂರ್ಣ ವರದಿಯಲ್ಲ. ಭಾರತದಲ್ಲಿ ಹಲವಾರು ಪಂಥಗಳ ಹೆಸರಲ್ಲಿ ಧರ್ಮದ ಕೆಲಸ ನಡೆಯುತ್ತಿದೆ. ಇಲ್ಲಿ ನಾನು ಕಂಡಿದ್ದು ಭಕ್ತಿ, ಭಕ್ತಿ, ಭಕ್ತಿ, ಭಕ್ತಿಯನ್ನಷ್ಟೇ. ಸುರಿವ ಮಳೆಗೂ ಅಂಜದೆ ಭಕ್ತಿಪರವಶರಾಗಿದ್ದ ನೂರಾರು ವೃದ್ಧರು! ಸಾವಿರಾರು ತರುಣರು. ನಾಗಾಸಾಧುಗಳನ್ನು ಸ್ವಾಗತಿಸುವಾಗ ಮುಗಿಲು ಮುಟ್ಟಿದ "ಹರ ಹರ ಮಹದೇವ್" ಘೋಷಣೆ.
































































ಒಂದು ಪುಟ್ಟ ಊರಿನಲ್ಲಿ ಇಂತಾ ಒಂದು ಮಹಾನ್ ಕಾರ್ಯಕ್ರಮವನ್ನು ಕೆಲವೇ ಭಕ್ತರು ಸೇರಿ ಮಾಡುತ್ತಾರೆಂದರೆ ಅದು ಅದ್ಭುತವೇ ಸರಿ. ಉತ್ತರಭಾರತದ ನಾಗಾಸಾಧುಗಳ ಪರಂಪರೆಯೇ ಬೇರೆ. ದಕ್ಷಿಣದ ಸಂನ್ಯಾಸಿಗಳಂತಲ್ಲ. ದತ್ತಾತ್ರೇಯ  ಉಪಾಸನೆ ಮಾಡುವ ಪಂಥದ ಹಲವು ಸಂನ್ಯಾಸಿಗಳು. ಕಣ್ಣಿಗೆ ಇಂಪು! ಸಡಗರ-ಸಂಬ್ರಮ!! 
               ಒಬ್ಬ ಸಾಧು ಚಂಡೆ ಹೊಡೆತಕ್ಕೆ ನರ್ತಿಸಿದಾಗ ಆ ಸಂನ್ಯಾಸಿಯನ್ನು ನಾನು ಕೇಳಿದೆ " ಆಪ್ ಭೀ ನರ್ತನ್ ಕರ್ತೇ ಹೈ"  ಆ ಸಂನ್ಯಾಸಿ ಹೇಳಿದರು "ಆನಂದ್ ಹೀ ಭಗವಾನ್ ಹೈ"

   ಸಮಾವೇಶದಲ್ಲಿ "ಗುರುಚರಿತ್ರೆ ಪಾರಾಯಣ" "ಹವನ ಹೋಮಗಳು" ಸಂಗೀತ ಕಛೇರಿ" "ಸಾಧುಸಂತರ ಉಪನ್ಯಾಸ" ಹೀಗೆ ವಿಭಿನ್ನ ಕಾರ್ಯಕ್ರಮಗಳು ನಡೆಯುತ್ತಿವೆ. ಆಶ್ಚರ್ಯವೆಂದರೆ ಇಂತಾ ಒಂದು ಬೃಹತ್ ಕಾರ್ಯಕ್ರಮದಲ್ಲಿ ಭಕ್ತರು ಮಾಡುತ್ತಿದ್ದ ಸೇವೆ! ನೂರಾರು  ಮಹಿಳೆಯರು ವಿಶಾಲವಾದ ಜಾಗದಲ್ಲಿ   ಒಟ್ಟಾಗಿ ಕುಳಿತು ತರಕಾರಿ ಹೆಚ್ಚಿ, ತೆಂಗಿನ ಕಾಯಿ ತುರಿದು ಬೃಹತ್ ಪ್ರಮಾಣದ ಅಡಿಗೆ ತಯಾರಿಗೆ ಸಹಕರಿಸುತ್ತಿದ್ದರೆ ಯುವಕರು ಸಾಮಾನು ಸರಂಜಾಮುಗಳನ್ನು ಸರಬರಾಜು ಮಾಡುವಲ್ಲಿ ತೊಡಗಿಸಿಕೊಂಡಿದ್ದರು. ಅಡಿಗೆಯವರು ಅಡಿಗೆಯನ್ನು  ಸೇವಾಮನೋಭಾವದಿಂದಲೇ ಮಾಡುತ್ತಿದ್ದರು  "ಮಾಡಿ ಮಾಡಿ ಎಳೆಯುತ್ತಿದ್ದರು" ಎಂದರೆ ತಪ್ಪಾಗಲಾರದು. ಪಾಲ್ಗೊಂಡ  ಎಲ್ಲರಿಗೊ ಊಟ,ತಿಂಡಿ, ಪಾನೀಯ ವ್ಯವಸ್ಥೆಗಳು ಜಾತ್ರೆಯಂತೆ ನಡೆದಿತ್ತು!

ವಿಶ್ವಹಿಂದು ಪರಿಷತ್, RSS ಅಂತಹ ಸಂಘಟೆಗಳಾಗಲೀ, ಆಥವಾ ರಾಮಕೃಷ್ಣ    ಮಿಷನ್ ಮುಂತಾದ  ಸಂಸ್ಥೆಗಳಾಗಲೀ, ಒಂದು ಬೃಹತ್ ಕಾರ್ಯಕ್ರಮವನ್ನು ನಡೆಸಬೇಕೆಂದರೆ ಅದಕ್ಕೆ ಒಂದೆರಡು ವರ್ಷಗಳ ತಯಾ ರಿಯನ್ನೇ ನಡೆಸುತ್ತವೆ. ಅದಕ್ಕಾಗಿ ಸಮಿತಿಗಳು ರಚನೆಯಾಗಿ , ಹಲವಾರು ಸಭೆಗಳು ನಡೆಯುತ್ತವೆ. ಆದರೆ ಇಷ್ಟೆಲ್ಲಾ ಬೃಹತ್ ಕಾರ್ಯಕ್ರಮವು ನಡೆಯಲು ಅಷ್ಟೆಲ್ಲಾ ವ್ಯವಸ್ಥಿತ ತಯಾರಿ ಏನಿಲ್ಲ. ರಾಜ್ಯಮಟ್ಟದ ಪ್ರಭಾವಿ ವ್ಯಕ್ತಿಗಳ ಸಮಿತಿಯೇನೂ ರಚನೆಯಾಗಿಲ್ಲ. ಪೂಜ್ಯ ವೆಂಕಟಾಚಲ ಅವಧೂತರ ನೂರಾರು ಶಿಷ್ಯರನ್ನು ಸಂಪರ್ಕಿಸಿ ಯೋಜನೆ ರೂಪಿಸಿದವರು ಶ್ರೀ ವಿದ್ಯಾಧೀಶರೆಂಬ ಶಿಷ್ಯರು.  ಸಮಿತಿ ಎಂದು ರಚಿಸಿಕೊಂಡಿದ್ದರೂ ಪರಿಚಿತ ಹತ್ತಾರು ಜನರನ್ನು ಅದರಲ್ಲಿ ಜೋಡಿಸಿರಬಹುದು.

        ಇಂತಾ ಬೃಹತ್ ಕಾರ್ಯಕ್ರಮದ ಯೋಜನೆ ಮಾಡುವಾಗ ನನ್ನನ್ನು ಮೂರ್ನಾಲ್ಕು ಸಲ ಶ್ರೀ ವಿದ್ಯಾಧೀಶರು ಭೇಟಿಮಾಡಿದ್ದಾರೆ. ಆಗ ನಾನು ಇಂತಾ ಬೃಹತ್ ಕಾರ್ಯಕ್ರಮ ರೂಪಿಸಲು ಹಣಕ್ಕೇನು ಮಾಡುತ್ತೀರೆಂದು ಪ್ರಶ್ನಿಸಿದಾಗ  ತಮ್ಮ ಹೆಗಲಿನಲ್ಲಿದ್ದ ಜೋಳಿಗೆಯನ್ನು ತೋರಿಸಿ ಅವರು ನೀಡುತ್ತಿದ್ದ ಉತ್ತರ " ಗುರು ಕೊಟ್ಟ ಜೋಳಿಗೆ ಇದೆ"

ನನಗೆ ನಿಜವಾಗಿ ಅಚ್ಚರಿಯೂ ಆತಂಕವೂ ಆಗುತ್ತಿತ್ತು. ಆದರೆ ಅವರಿಗೆ ಗುರು ನಡೆಸುತ್ತಾನೆಂಬ ಅಚಲ ವಿಶ್ವಾಸ! ಅಂತೂ ಬೃಹತ್  ಕಾರ್ಯಕ್ರಮವು ಅದ್ಧೂರಿಯಾಗೇ ನಡೆದಿದೆ. ವ್ಯವಸ್ಥೆಯಲ್ಲಿ  ವಿಶ್ವಹಿಂದೂ ಪರಿಷತ್ತಿನಂತಹ ಧಾರ್ಮಿಕ ಕಾರ್ಯಕರ್ತರು ಇನ್ನೂ ಹೆಚ್ಚು ರೀತಿಯಲ್ಲಿ ಜೋಡಿಸಿಕೊಂಡಿದ್ದರೆ ಚೆನ್ನಾಗಿತ್ತು. ಎಂಬುದು ನನ್ನ ಅನಿಸಿಕೆ. ಅಂತೂ ಇಂತಾ ಧರ್ಮಜಾಗೃತಿಯ ಕೆಲಸಗಳು ನಡೆಯುತ್ತಿರಬೇಕು.

          ವೇದಸುಧೆಯ ಉದ್ಧೇಶವೆಂದರೆ ನಿರಂತರವಾಗಿ ಸಾಮಾನ್ಯ ಜನರಲ್ಲಿ ವೇದದ ಅರಿವು ಉಂಟು ಮಾಡಿಸುವುದು. ವೇದಭಾರತಿಯ ಹೆಸರಲ್ಲಿ ಆ ಕೆಲಸ ನಡೆಯುತ್ತಲೇ ಇದೆ. ವೇದ ಭಾರತಿಯ ಹಲವಾರು ಸದಸ್ಯರು  ಇಂತಾ ಬೃಹತ್ ಕೆಲಸದಲ್ಲಿ ಸ್ವಲ್ಪವಾದರೂ ಜೋಡಿಸಿಕೊಂಡಿದ್ದಾರೆ. ಬರುವ ನವಂಬರ್ ಎರಡರವರಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು  ಈಗಲೂ ಅವಕಾಶ ಇದ್ದೇ ಇದೆ.

ಸ್ಥಳ:

ಬಾಣಾವರ . ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ.

ಶಿವಮೊಗ್ಗ, ಬೆಂಗಳೂರು, ಮೈಸೂರು, ತುಮಕೂರುಗಳಿಂದ ರೈಲಿನಲ್ಲಿ ಬರುವವರು ಅರಸೀಕೆರೆಯಲ್ಲಿ ಇಳಿದು, ಅಲ್ಲಿಂದ  ಅರ್ಧಗಂಟೆ ಬಸ್ ನಲ್ಲಿ ಪ್ರಯಾಣಿಸುವುದು ಉತ್ತಮ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ