ಸೋಮವಾರ, ಡಿಸೆಂಬರ್ 26, 2011

ನಮ್ಮ ಮನೆ

ದಿನಾಂಕ 25-12-2012ರಂದು ಹಾಸನದಲ್ಲಿ ನಡೆದ ಕವಿಮನೆತನದವರ ಮತ್ತು ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು ಮತ್ತು ಕುಟುಂಬ ಪ್ರಬೋಧನ್ ಸಂಸ್ಥೆಯ ಸಂಯೋಜಕರಾದ ಸನ್ಮಾನ್ಯ ಶ್ರೀ ಸು.ರಾಮಣ್ಣನವರು ನಮ್ಮ ಕುಟುಂಬ-ನಾವು-ನಮ್ಮವರು-ನಮ್ಮ ಮನೆ ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಆ ಸಂದರ್ಭದಲ್ಲಿ ಅವರು 'ನಮ್ಮ ಮನೆ' ಎಂಬ ಹಾಡನ್ನು ಹೇಳಿಕೊಟ್ಟು ಕಾರ್ಯಕ್ರಮಕ್ಕೆ ಬಂದಿದ್ದವರೆಲ್ಲರಿಗೂ ಹೇಳಿಸಿ ಕಾರ್ಯಕ್ರಮ ಪ್ರಾರಂಭಿಸಿದ್ದು ವಿಶೇಷವೆನಿಸಿತು. ಸಂವಾದದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲುಗೊಂಡಿದ್ದರು. ಮಿತ್ರ ಹರಿಹರಪುರ ಶ್ರೀಧರರು ಹಾಡಿನ ಭಾಗದ ದೃಷ್ಯ-ಧ್ವನಿಗ್ರಹಣ ಮಾಡಿದ್ದು ಅದನ್ನು ನಿಮ್ಮ ಕೇಳುವಿಕೆಗಾಗಿ ಇಲ್ಲಿ ಪ್ರಸ್ತುತ ಪಡಿಸಿದೆ. ಹಾಡಿನ ಸಾಹಿತ್ಯವನ್ನೂ ಕೆಳಗೆ ಕೊಟ್ಟಿದೆ.
-ಕ.ವೆಂ.ನಾಗರಾಜ್.

ನಮ್ಮ ಮನೆ
ನಮ್ಮ ಮನೆ ಇದು ನಮ್ಮ ಮನೆ
ನಲಿವಿನ ಅರಿವಿನ ನಮ್ಮ ಮನೆ |
ರೀತಿಯ ನೀತಿಯ ಭದ್ರ ಬುನಾದಿಯ
ಮೇಲೆ ನಿಂತಿದೆ ನಮ್ಮ ಮನೆ || ಪ ||

ತಾಯಿಯ ಮಮತೆಯ ತಂದೆಯ ಪ್ರೀತಿಯ
ಸೆಲೆಯಲಿ ತೆರೆದಿದೆ ನಮ್ಮ ಮನೆ
ಅಜ್ಜಿಯ ಕಥೆಯ ಅಜ್ಜನ ಶಿಸ್ತಿನ
ನಿಲುವಲಿ ನಿಂತಿದೆ ನಮ್ಮ ಮನೆ || 1 ||

ಹಕ್ಕಿಗಳುಲಿವಿಗೆ ನೇಸರನುದಯಕೆ
ಏಳುವರೆಲ್ಲರು ಮುದದಿಂದ
ಮೀಯುತ ಮಡಿಯಲಿ ನೆನೆಯುತ ದೇವಗೆ
ಭಕುತಿಯ ನಮನ ಕರದಿಂದ || 2 ||

ಅಕ್ಕತಂಗಿಯರ ಅಣ್ಣತಮ್ಮದಿರ
ಕದನಕುತೂಹಲ ಮುದವಿರಲು
ಬೆಳೆಯುತ ನಾವು ಮುಂದಿನ ಪ್ರಜೆಗಳು
ದೇಶದ ಆಸ್ತಿಯು ನಾವೆನಲು || 3 ||

ಹಬ್ಬಹರಿದಿನದಿ ಮಾವುಬಾಳೆಯು
ಸಿಂಗರಿಸಿರಲು ಹಸಿರಿಂದ
ರಂಗವಲ್ಲಿಯ ಹೊಸ್ತಿಲದೀಪವು
ರುಚಿ ರುಚಿ ಅಡಿಗೆಯು ಘಮ್ಮೆಂದು || 4 ||

ಏಳುಬೀಳಿಗೆ ಕದಲದ ಮನವು
ಛಲದಲಿ ದುಡಿಯುವ ಕೈಗಳಿವು
ಬೀಳಿಗೆ ಆಸರೆ ಏಳ್ಗೆಗೆ ಹರಕೆ
ತುಂಬಿದ ಮನೆ ಮೇಲ್ ತಾಣವು || 5 ||

ಶಾಲೆಯು ಇದುವೆ ಬದುಕಿನ ಪಾಠಕೆ
ನಾಳೆಯ ಕನಸಿಗೆ ಕೇತನವು
ದೇಶವ ಕಟ್ಟುವ ಸಂಸ್ಕೃತಿ ಸಾರಕೆ
ಕೇಶವ ಕುಲದ ನಿಕೇತನವು || 6 ||


ನಮ್ಮ ಮನೆ ಸಂವಾದ: ಭಾಗ-1


ನಮ್ಮ ಮನೆ ಸಂವಾದ: ಭಾಗ-2

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ