ಭಾನುವಾರ, ಆಗಸ್ಟ್ 5, 2012


Podcast Powered By Podbean

ಶುಕ್ರವಾರ, ಜೂನ್ 8, 2012

ಮಂಗಳವಾರ, ಜೂನ್ 5, 2012

ಯಾವುದು ಸರಿ? ಯಾವುದು ತಪ್ಪು?



ಯಾವುದು ಸರಿ? ಯಾವುದು ತಪ್ಪು? ಅನ್ನೋ ವಿಚಾರದಲ್ಲಿ ,ಇದು ಹೀಗೇ ಅಂತಾ ಯಾರೂ ಹೇಳಲು ಸಾಧ್ಯವಿಲ್ಲ.ನನಗೆ ಇದು ಒಳ್ಳೆಯ ವಿಚಾರ ಎಂದು ಮನವರಿಕೆಯಾಗಿ ಈ ವಿಚಾರಕ್ಕೆ ನಾನು ಸ್ವಲ್ಪ ಪ್ರಚಾರಕೊಟ್ಟರೆ ನಾಲ್ಕು ಜನರಿಗೆ ಒಳ್ಳೆಯದಾಗಬಹುದು, ಎಂದು ನಾನು ಭಾವಿಸುತ್ತೀನಲ್ಲಾ, ಅಲ್ಲೇ ನಾನು ತಪ್ಪು ಮಾಡುತ್ತಿದ್ದೀನಿ, ಅಂತಾ ನನಗೆ ಅನುಭವವಾಗ್ತಾ ಇದೆ. ಎಲ್ಲಕ್ಕಿಂತಲೂ ಅನುಭವದ ಅರಿವಿದೆಯಲ್ಲಾ, ಅದೇ ಹೆಚ್ಚು ಸೂಕ್ತ ಎಂಬುದು ನನ್ನ ಅಭಿಪ್ರಾಯ. ಅದು ನಿಮ್ಮ ಅಭಿಪ್ರಾಯ ಆಗಬೇಕಿಲ್ಲ. ಅಂದಹಾಗೆ ಈ ಗುಂಪು ಆರಂಭಿಸುವಾಗಲೇ ಅವರವರ ಮನದಾಳದ ಮಾತಿಗೆ ಇದು ವೇದಿಕೆ ಎಮ್ದು ಅರಿಕೆ ಮಾಡಿದ್ದೀನಷ್ಟೇ. ಅವರವರ ಮನದಾಳದ ಮಾತನ್ನು ಮುಕ್ತವಾಗಿ ಇಲ್ಲಿ ಒದರಿದರಾಯ್ತು. ನಾನು ಬರೆಯುತ್ತಿರುವುದು ನನಗಾಗಿ ಎಂಬ ಭಾವನೆ ಇದ್ದರೆ ಆಯ್ತು. ಯಾರ ಮೆಚ್ಚುಗೆಯನ್ನೂ ನಿರೀಕ್ಷಿಸುವುದು ಬೇಡ. ಈ ಫೇಸ್ ಬುಕ್ ನಲ್ಲಿ like and comments ಇಲ್ಲದಿದ್ದರೆ ಚೆನ್ನಾಗಿತ್ತು. ಹೇಲಬೇಕೆಂಬುದನ್ನು ಬರೆದು ಪೋಸ್ಟ್ ಮಾಡಿದರೆ ಮುಗಿಯಿತು. ಮುಂದಿನವರು ತಮ್ಮ ವಿಚಾರವನ್ನು ಮುಂದಿನ ಪೋಸ್ಟ್ ನಲ್ಲಿ ಬರೆದರಾಯ್ತು. ಅದೇ ಸರಿ ತಪ್ಪು ಎಂಬುದು ಅವರವರ ಭಾವಕ್ಕೆ ಬಿಟ್ಟಿದ್ದು, ಎಂಬುದನ್ನು ವಿವರಿಸಲು ಈ ಹೆಣಗಾಟ. 

ಲೋಕೋ ಭಿನ್ನ ರುಚಿ: ಅನ್ನೋ ಮಾತು ಕೇಳಿದ್ದೀವಿ. ನಮ್ಮ ನಮ್ಮ ಆಸಕ್ತಿ ಅಭಿರುಚಿಗಳು ಬೇರೆ ಬೇರೆ. ನನ್ನಂತೆ ನೀವಿರಬೇಕಿಲ್ಲ. ನಿಮ್ಮಂತೆ ನಾನಿರಬೇಕಿಲ್ಲ. ಒಮ್ಮೊಮ್ಮೆ ಏನಾಗುತ್ತೆ, ಅಂದ್ರೆ , ಕೆಲವರ ಮಾತು ಹಿತವಾಗುತ್ತೆ, ಆಗ ನನ್ನ-ಅವರ ಆಸಕ್ತಿ ಗಳು ಹೆಚ್ಚು ಕಮ್ಮಿ ಸಮಾನ ವಾಗಿರಬಹುದು. ಎಂದು ತಿಳಿಯಬಹುದು. ಆದರೂ ಅದೂ ಕೂಡ ಶಾಶ್ವತ ಅಲ್ಲ, ಆ ಸಂದರ್ಭದಲ್ಲಿ ಆ ಮಾತು ನನಗೆ ಹಿತವಾಗಿ ಕಂಡಿರಬಹುದು. ಆಗಿನ ನನ್ನ ಮನಸ್ಸಿನ ಸ್ಥಿತಿಯ ಮೇಲೂ ಹಿತ-ಅಹಿತ ಎಂಬುದು ನಿಂತಿದೆ. 

ಸಸ್ಯಾಹಾರ ಆರೋಗ್ಯಕ್ಕೆ ಉತ್ತಮ ಎಂಬ ಬರವಣಿಗೆ ನೋಡಿದಾಗ ಹಲವರು ಅದಕ್ಕೆ ವಿರೋಧವನ್ನೂ ಮಾಡಿದರು.ಅದು ಅವರ ಇಚ್ಚೆ. ಅದು ನನ್ನ ಇಚ್ಚೆ ಆಗಬೇಕಿಲ್ಲ. 

ಯಾವಾಗಲೂ ಭಗವದ್ಗೀತೆಯ ಒಂದು ಮಾತು ನನ್ನ ಸ್ಮೃತಿಪಟಲದಲ್ಲಿ ನೆನಪಾಗುತ್ತಲೇ ಇರುತ್ತದೆ" ಉದ್ಧರೇದಾತ್ಮ ನಾತ್ಮಾನಾಂ,ಆತ್ಮಾನ ಮವಸಾಧಯೇತ್, ಆತ್ಮೈವಹ್ಯಾತ್ಮನೋ ಬಂಧು: ,ಆತ್ಮೈವ ರಿಪುರಾತ್ಮನ:"........ನಮ್ಮ ಬರವಣಿಗೆ ಯಿಂದ ಏನೋ ಉದ್ಧಾರವಾಗಿಬಿಡುತ್ತದೆಂದು ಭಾವಿಸುವವರು ಶ್ರೀ ಕೃಷ್ಣನ ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕಲ್ಲವೇ? ............
ಇದೂ ಅಷ್ಟೆ, ನನ್ನ ಈಗಿನ ಮನ:ಸ್ಥಿತಿ ಅಷ್ಟೇ. ನಿನ್ನೆ ಇದ್ದಂತೆ,ಈಗಿಲ್ಲ, ಈಗಿನಂತೆ ನಾಳೆ ಇರಬೇಕಿಲ್ಲ. ಅನುಭವ ಆಗ್ತಾ ಆಗ್ತಾ ಮಾಗಲೂ ಬಹುದು, ಕೊಳೆಯಲೂ ಬಹುದು. ಎಲ್ಲವೂ ನಮ್ಮ ಕೈಲಿದೆ, ಅಲ್ಲವೇ?

ಸೋಮವಾರ, ಜೂನ್ 4, 2012

ಶುಕ್ರವಾರ, ಜೂನ್ 1, 2012

ಯಾಕೆ ಅವರು ಮನುಷ್ಯರಲ್ಲವೇ?



ಮನುಷ್ಯನಿಗೆ ತನ್ನನ್ನು ಉತ್ತಮಪಡಿಸಿಕೊಳ್ಳಲು ಚಿಕ್ಕ ಪುಟ್ಟ ಘಟನೆಗಳೂ ಪ್ರೇರಣೆ ಕೊಡಬಲ್ಲವು, ಸಾಮಾನ್ಯ ಜನರೂ ಪ್ರೇರಕರಾಗಬಲ್ಲರು. ಈ ಮಾತನ್ನು ಹೇಳಲು ಇಂದು ನಾನು ಸಾಕ್ಷಿಯಾದ ಒಂದು ಘಟನೆಯನ್ನು ಇಲ್ಲಿ ಬರೆಯುವೆ. ಇಂದು ಹಿಂದು ಸಾಮ್ರಾಜ್ಯೋತ್ಸವ ಪ್ರಯುಕ್ತ ಆರ್.ಎಸ್.ಎಸ್. ನವರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬೆಳಿಗ್ಗೆ ಏಳು ಗಂಟೆಗೆ ಹೋಗಿದ್ದೆ. ಕಾರ್ಯಕ್ರಮಮುಗಿಸಿ ಒಂದು ಹೋಟೆಲ್ ನಲ್ಲಿ ಮಿತ್ರನೊಡನೆ ಕಾಫಿ ಹೀರುತ್ತಾ ಕುಳಿತೆ. ಎದುರು ಮೇಜಿನಲ್ಲಿ ಕುಳಿತಿದ್ದ ಮಧ್ಯ ಪ್ರಾಯದ ವ್ಯಕ್ತಿಯೋರ್ವರು " ಸಾರ್, ಸಾರ್ , ಎಂದು ಕರೆದರು" ಹತ್ತಿರದಲ್ಲಿಯೇ ಇದ್ದ ಮಾಣಿ ಅವರತ್ತ ನೋಡದೆ ಸುಮ್ಮನೆ ನಿಂತಿದ್ದರು. ಮತ್ತೆ ಆತ " ಸಾರ್ ನಿಮ್ಮನ್ನೇ ಕರೆಯುತ್ತಿರುವುದು" ಎಂದು ಮಾಣಿಯನ್ನುದ್ಧೇಶಿಸಿ ಮತ್ತೆ ಕರೆದರು. ಆಗ ಎಚ್ಚೆತ್ತ ಮಾಣಿ " ಸಾರ್, ಹೇಳಿ, ಏನು ಬೇಕು?-  ಕೇಳಿದರು.

ಆ ವ್ಯಕ್ತಿ ತಮಗೆ ಬೇಕಾದ್ದನ್ನು ಹೇಳಿದರು. ಮಾಣಿ ಖುಷಿಯಿಂದ ಅವರ ಸೇವೆಯಲ್ಲಿ ತೊಡಗಿಸಿಕೊಂಡರು. ಕುಟುಂಬ ಸಹಿತ ಬಂದಿದ್ದ ಆ ವ್ಯಕ್ತಿಗೆ ಬಲು ಸಂತಸದಿಂದ ಅವರಿಗೆ ಬೇಕಾದ್ದನ್ನು ತಂದು ಅವರ ಮಕ್ಕಳೊಡನೆ ತಮಾಶೆ ಮಾಡಿಕೊಂಡು ಖುಷಿಯಾಗಿದ್ದರು.



ಈ ಘಟನೆ ನೋಡುತ್ತಿದ್ದ ನಮಗೆ ಏಳಲು ಮನಸ್ಸೇ ಬರಲಿಲ್ಲ. ಅವರ ಸಂಭಾಷಣೆಯನ್ನು ಸ್ವಲ್ಪಹೊತ್ತು ಆಲಿಸಿ ನಂತರ ಎದ್ದು ಹೊರಬರುವಾಗ ಆವ್ಯಕ್ತಿಯ ನಗುಮುಖ ಹಾಗೆಯೇ ನನ್ನ ಮನ: ಪಟಲದ ಮೇಲೆ ಉಳಿದಿತ್ತು.


ಅಲ್ಲಿಂದ ಮನೆಗೆ ಬರುವ ವೇಳೆಗೆ   ಸಿಮೆಂಟ್ ನಲ್ಲಿ ಮಾಡಿದ್ದ ಕುಂಡಗಳನ್ನು ತಳ್ಳುವ ಗಾಡಿಯಲ್ಲಿಟ್ಟು  ಮಾರಾಟಮಾಡುತ್ತಿದ್ದುದನ್ನು ಕಂಡೆ.ವಿಚಾರಿಸಿದೆ. ಒಂದು ಕುಂಡಕ್ಕೆ 30 ರೂಪಾಯಿ ಹೇಳಿದರು. ಎಂಟು ಕುಂಡಗಳನ್ನು ಕೊಂಡೆ. ಮೂರು ಮಹಡಿಗಳನ್ನು ಹತ್ತಿ  ಆರ್.ಸಿ.ಸಿ. ಮೇಲೆ ಆ ಕುಂಡಗಳನ್ನು ಸಾಗಿಸಬೇಕು. ಮಾರಾಟಗಾರನಲ್ಲಿ ಮನವಿ ಮಾಡಿಕೊಂಡೆ, ಆಯ್ತು ಸಾರ್, ಅಲ್ಲಿಯೇ ಇಟ್ಟು ಬರುತ್ತೀನೆಂದರು. ಕೆಲಸ ಆಯ್ತು. ಜೊತೆಗೆ ಇಪ್ಪತ್ತು ರೂಪಾಯಿ ಸೇರಿಸಿ ಕೊಟ್ಟೆ.
ಆ ವ್ಯಕ್ತಿ ಹೇಳಿದರು" ಸಾರ್ 240 ಆಗುತ್ತೆ. 260 ರೂಪಾಯಿ ಕೊಟ್ಟಿದ್ದೀರಲ್ಲಾ! 
ನಾನು ಹೇಳಿದೆ" ನನ್ನ ಕೈಲಿ ಅಲ್ಲಿಗೆ ಸಾಗಿಸಲು ಕಷ್ಟವಾಗುತ್ತಿತ್ತು. ನೀವು ಸಹಾಯ ಮಾಡಿದಿರಲ್ಲಾ, 20 ರೂಪಾಯಿ ಎಕ್ಸ್ಟ್ರಾ ಕೊಟ್ಟಿರುವೆ, ಎಂದೆ. ರಸ್ತೆಯಲ್ಲಿ ಬರುವಾಗ ಮಾವಿನಹಣ್ನು ತಂದಿದ್ದೆ. ಒಂದು ಮಾವಿನಹಣ್ಣು  ಕೊಟ್ಟೆ. ಆ ಮುಖದ      ನ ಸಂತೋಷ ನೋಡಬೇಕು!..........
ನಿಜವಾಗಿ ತಳ್ಳು ಗಾಡಿಯವರನ್ನು, ತಲೆಯ ಮೇಲೆ ಹೊತ್ತು ಮಾರುವವ ರನ್ನು       ,ಕೂಲಿ ಕೆಲಸ ಮಾಡುವವರನ್ನು , ಆಟೊ ಡ್ರೈವರ್ ಗಳನ್ನು, ಹೋಟೆಲ್ ಮಾಣಿಗಳನ್ನು ಎಷ್ಟು ಕೇವಲ ವಾಗಿ ಕಾಣುತ್ತೀವಲ್ಲವೇ? ಯಾಕೆ ಅವರು ಮನುಷ್ಯರಲ್ಲವೇ? 
ಬೆಂಗಳೂರಿನ ಹನುಮಂತನಗರದಿಂದ ವಿಜಯನಗರಕ್ಕೆ ಆಟೋದಲ್ಲಿ ಬಂದೆ. ಆಟೋಚಾಲಕ  ಚಿಕ್ಕ ಚಿಕ್ಕ ರಸ್ತೆಗಳಲ್ಲಿ ಸಾಗಿ ವಿಜಯನಗರ ತಲುಪಿದರು. ಮನೆ ಮುಂದೆ ನಿಂತಾಗ " ಎಷ್ಟಾಯಿತು? " ಎಂದೆ. 57 ರೂಪಾಯಿ ಸಾರ್,  ಮೀಟರ್ ದರ ಹೆಚ್ಚಿದಮೇಲೆ ಹೆಚ್ಚಿನ ದರದ ಪಟ್ಟಿಯಂತೆ 68 ರೂಪಾಯಿ ಕೊಡಿ ಎಂದು ಹೇಳಿದರು.ನೂರು ರೂಪಾಯಿ ಕೊಟ್ಟೆ. 30ರೂಪಾಯಿ ಹಿಂದಿರುಗಿಸಿದವರು ಎರಡು ರೂಪಾಯಿಗಾಗಿ ಜೇಬೆಲ್ಲಾ ಹುಡುಕುತ್ತಿದ್ದರು. ಪರವಾಗಿಲ್ಲ ಎಂದೆ.ಆ ಹೊತ್ತಿಗೆ ಮನೆಯೊಳಗಿದ್ದ ನನ್ನ ತಂಗಿ ಹೊರಬಂದು" ಈ ಆಟೋದವರು ಹೊಸಬರನ್ನು ಕಂಡರೆ ಸುಲಿಗೆ ಮಾಡಿ ಬಿಡ್ತಾರೆ, ಎಂದು ಬಿಟ್ಟಳು. ನನಗೆ ತುಂಬಾ ಕಸಿವಿಸಿಯಾಯ್ತು. "ಇಲ್ಲಮ್ಮ, ಅವರು ಸರಿಯಾಗಿಯೇ ಬಂದಿದ್ದಾರೆ. ಸರಿಯಾಗಿಯೇ ಹಣತೆಗೆದುಕೊಂಡಿದ್ದಾರೆ, ಎಂದರೂ ಅವಳಿಗೆ ಸಮಾಧಾನವಾಗುತ್ತಿಲ್ಲ, ಡ್ರೈವರ್ ಗೆ ವಿದಾಯ ಹೇಳಿ, ನನ್ನ ತಂಗಿಗೆ ಕ್ಲಾಸ್ ತೆಗೆದುಕೊಂಡೆ. ಪಾಪ! ಆಟೋ ಡ್ರೈವರ್ ಬಹಳ ಸಮೀಪದ ಹಾದಿಯಲ್ಲಿ ಬಂದು ನನಗೆ ಉಳಿತಾಯ ಮಾಡಿದ್ದರು. ಹಾಗಂತ  ಎಲ್ಲರೂ  ಹಾಗೆಯೇ ಇರ್ತಾರೆ, ಅಂತಲ್ಲ. ಆದರೆ ನನ್ನ ಅನುಭವವೆಂದರೆ ನನಗೆ ಯಾರೂ ಮೋಸ ಮಾಡಿಯೇ ಇಲ್ಲ.


[ಚಿತ್ರಗಳು ಗೂಗಲ್  ಕೃಪೆ]

ಗುರುವಾರ, ಮೇ 31, 2012

ಈ ಬಾಲಕನ ಕೊಳಲಿನ ಧ್ವನಿಗೆ ಬೆಕ್ಕೂ ಮಾರು ಹೋಯಿತೇ?


Thanks to Dr. Jessey

ಶ್ರೀ ರಾಮಚಂದ್ರ ಕೃಪಾಲು ಭಜಮನ......

Tulasi Raama stotra by Hariharapura Sridhar

ಡಿಂಬಾದಲ್ಲಿರುವ ಜೀವ....

ಶಂಕರಾಚಾರ್ಯರು ಶಿಶ್ಯರೊಡನೆ


ಬುಧವಾರ, ಮೇ 30, 2012

ಇವತ್ತಿಗೂ ಅವನೇ...ಈಕ್ಷಣಕ್ಕೂ ಅವನೇ... ನಾಳೆಗೂ ಅವನೇ


ನನ್ನ ಪತ್ನಿ ನಿತ್ಯವೂ ನನಗೆ ಹೇಳುವ ಮಾತು" ನಿಮಗೆ ಏನೂ ಗೊತ್ತಾಗುಲ್ಲಾ, ನಿಮಗೆ ವ್ಯವಹಾರಜ್ಞಾನವೇ ಇಲ್ಲ"
"ಪರವಾಗಿಲ್ಲ. ಏನಾಯ್ತೀಗ?" ಅನ್ನೋದು ನನ್ನ ಮಾತು....ಯಾಕೆ  ನನ್ನ ಪತ್ನಿ ಹಾಗೆಲ್ಲಾ ಮಾತಾಡ್ತಾಳೆ ಅಂದ್ರೆ....ಮನೆ ಮುಂದೆ ತರಕಾರಿ ವ್ಯಾಪಾರ ಮಾಡುವವರಲ್ಲಿ, ಮನೆ ಕೆಲಸಗಾರರಲ್ಲಿ, ಶ್ರಮ ಜೀವಿಗಳೊಡನೆ ನಾನು ಚರ್ಚೆ ಮಾಡಲು ಹೋಗುಲ್ಲ. ಅವರು ಕೇಳಿದಷ್ಟು ಕೊಟ್ಟು ಬಿಡ್ತೀನಿ. " ನೀವು ದಾನ ಶೂರ ಕರ್ಣ" ಅಂತಾ ಹಂಗಿಸಬೇಡಿ. ನನಗೆ ಯಾವತ್ತಿನಿಂದ ಜೀವನಕ್ಕೆ ತೊಂದರೆ ಯಾಗಿಲ್ಲ, ಅಂದಿನಿಂದ ಹಣವನ್ನು ಉಳಿತಾಯಮಾಡಬೇಕೆಂಬ ಆಸೆ ಬಂದಿಲ್ಲ. ಆಗಾಗ ಯಾವ ಯಾವ ಕೆಲಸ ಮಹತ್ವ ಪಡೆಯುತ್ತವೋ ಅದನ್ನು ಹೇಗಾದರೂ ಮಾಡಿ ಯಶಸ್ವಿಯಾಗಿ ಮುಗಿಸಿದರೆ ಆಯ್ತು. ಮುಂದೆ ನೋಡಿ    ಕೊಳ್ಳೋಣ , ದೇವರಿದ್ದಾನೆ, ಎಂಬ ಭಾವನೆ. ನೋಡಿ ಆ ದೇವರು ಕಳೆದ 25 ವರ್ಷಗಳಿಂದ [ಎಂದಿನಿಂದ ನಾನು ಅವನನ್ನು ಹೊಣೆ ಮಾಡಿದೆ, ಅಂದಿನಿಂದ ಸಲೀಸಾಗಿ ನಡೆಸಿಕೊಂಡು     ಹೋಗುತ್ತಿದ್ದಾನೆ. ನಾಳೆಗೆ ಇಡುವ ಪ್ರಶ್ನೆ ಉದ್ಭಸಿಯೇ ಇಲ್ಲ. ನಾಳೆಗೆ ಅವನಿದ್ದಾನೆ......
ಎರಡು ಮನೆ ಕಟ್ಟುವ ಅವಕಾಶ ಒದಗಿ ಬಂತು. ಒಂದು ನಮ್ಮ ಹಳ್ಳಿಯಲ್ಲಿ . ಒಂದು ಹಾಸನದಲ್ಲಿ. ಆಗೆಲ್ಲಾ ಶ್ರಮಜೀವಿಗಳಿಗೆ ಉದಾರವಾಗಿಯೇ ನೀಡಿದೆ[ಹೀಗೆಂದು ಹೇಳಿಕೊಳ್ಳಬಾರದು, ಆದರೂ ವಿಚಾರ ಹಂಚಿಕೊಳ್ಳದಿದ್ದರೆ ಅದು ಬೇರೆಯವರ ವಿಮರ್ಶೆಗೆ ದಕ್ಕುವುದಿಲ್ಲವಲ್ಲ]
ಅಂದಹಾಗೆ ನಾನು ಯಾವುದನ್ನೂ ವ್ಯಾವಹಾರಿಕವಾಗಿ ನೋಡಲೇ ಇಲ್ಲ. ಶ್ರಮಜೀವಿಗಳಿಗೆ ಅವರ ಕೆಲಸಕ್ಕೆ ಸ್ವಲ್ಪ ಹೆಚ್ಚು ನೀಡಿದರೆ ಆ ಮೂಲಕವಾದರೂ ಅವರ ಯಾವುದೋ ಕಷ್ಟ ಕಾರ್ಪಣ್ಯಕ್ಕೆ ನೆರವಾದಂತೆ ಆಗುತ್ತದೆಂಬುದು ನನ್ನ ಭಾವನೆ. ಈ ಮಾತು ಬಂದಾಗ ಒಬ್ಬರು ತಿಳಿದವರು ನನಗೆ ಏನು ಹೇಳಿದರು ಗೊತ್ತೇ?.......ಬಿಕ್ಷೆಗೆ ಬಂದವನಿಗೆ ಉದಾರವಾಗಿ ನೀಡಿದರೆ ಅವನು ಶಂಖ ಜಾಗಟೆಯನ್ನು ನಿಮ್ಮ ಮನೆ ಬಾಗಿಲಲ್ಲೇ ನೇತುಹಾಕಿ ಆರಾಮವಾಗಿದ್ದು ಬಿಡುತ್ತಾನೆ! 
ಅದು ಅವರ ಭಾವನೆ. ನನ್ನ ಭಾವನೆ ಇದು. ಹುಟ್ಟುವಾಗ ಅತಿ ಬಡತನದಲ್ಲಿ ಬೆಂದ ನನಗೆ ಇಂದು ಭಗವಂತನು ಚೆನ್ನಾಗಿಯೇ ಕೊಟ್ಟಿದ್ದಾನೆಂಬ ಸಂತೋಷವಿದೆ. ನಾಳೆಗೆ ಯೋಚಿಸುವುದಿಲ್ಲ. ಇವತ್ತಿಗೂ ಅವನೇ...ಈಕ್ಷಣಕ್ಕೂ ಅವನೇ... ನಾಳೆಗೂ ಅವನೇ.

ಗುರುವಾರ, ಮೇ 24, 2012

ಗೌರತ್ತೆ




ನಾಲ್ಕು ವರ್ಷಗಳ ಹಿಂದೆ  "ಸಂಪದದಲ್ಲಿ "ಪ್ರಕಟವಾಗಿದ್ದ ಈ ಲೇಖನವನ್ನು ನಮ್ಮತ್ತೆಯ ನೆನಪು ಮಾಡಿಕೊಂಡು ಇಲ್ಲಿ ಪುನ: ಪ್ರಕಟಿಸಿರುವೆ.


ಯಾಕೋ ಇವತ್ತು ನಮ್ಮ ಗೌರತ್ತೆ ನೆನಪು ತುಂಬಾ ಕಾಡ್ತಾ ಇದೆ. ಮನುಷ್ಯನ ಸ್ವಭಾವವೇ ಹಾಗೆ.ಮನೆಯಲ್ಲಿ ಮನೆಮಂದಿಯೆಲ್ಲಾ ಆರೋಗ್ಯವಾಗಿ ಸುಖವಾಗಿದ್ದಾಗ , ಕೈತುಂಬಾ ಕಾಸು ಓಡಾಡ್ತಾ ಇದ್ದಾಗ , ಯಾರ ನೆನಪೂ ಆಗುಲ್ಲಾ. ಅರೆ ನಾನು ಕಷ್ಟಪಟ್ಟು ಕೆಲಸ ಮಾಡ್ತೀನಿ, ಕೈತುಂಬಾ ದುಡೀತೀನಿ, ಯಾರ ಮುಲಾಜು ಏನು? ಸೋಮಾರಿಗಳಾದ್ರೆ ಅವರಿಗೆ ಬದುಕು ಕಷ್ಟ, ಕಷ್ಟ ಪಟ್ಟು ಕೆಲಸ ಮಾಡೋರು ಯಾಕೆ ಹೆದರಬೇಕು? ನಮ್ಮ ಮೂಗಿನ ನೇರಕ್ಕೆ ಎಷ್ಟೆಲ್ಲಾ ಮಾತನಾಡ್ತೀವಿ ರೀ. ಏನೋ ಆ ಭಗವಂತ ಎಲ್ಲವನ್ನೂ ಚೆನ್ನಾಗಿ ಕೊಟ್ಟಾಗ ಹೀಗೆ ನಾವು ಅವನನ್ನೂ ಮರೆತು ಮಾತನಾಡ್ತೀವಿ. ಆದರೆ ಒಂದು ಚಿಕ್ಕ ಕಷ್ಟ ಬಂತೂ ಅಂದ್ರೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಆಡ್ತೀವಿ. ಆಲ್ವಾ? ಯಾಕೆ ಇಷ್ಟೆಲ್ಲಾ ಬರೀತಿದೀನಿ ಅಂದ್ರೆ , ಕಳೆದ ಎಂಟು ದಿನಗಳಿಂದ ನನಗೆ ವೈರಲ್ ಫೀವರ್, ನಿನ್ನೆಯಿಂದ ಹೆಂಡತಿ ಹಾಗೂ ಮಗ ಇಬ್ರಿಗೂ ಜ್ವರ ಶುರುವಾಗಿದೆ. ಎಲ್ಲರೂ ಒಟ್ಟಿಗೆ ಡಾಕ್ಟರ್ ಹತ್ತಿರ ಹೋಗಿ ಸೂಜಿ ಹಾಕಿಸಿಕೊಂಡು ಬಂದಿದ್ದಾಯ್ತು.ಮನೇಲಿ ಯಜಮಾನನಿಗೆ,ಮಕ್ಕಳಿಗೆ ಹುಷಾರು ತಪ್ಪಿದರೆ ಯಜಮಾಂತಿ ಎಲ್ಲರನ್ನೂ ಸುದಾರಿಸಿಬಿಡ್ತಾಳೆ. ಕಾಲಕಾಲಕ್ಕೆ ಹೊಟ್ಟೆಗೆ ಚೆನ್ನಾಗಿಯೇ ಆಗುತ್ತೆ.ಆದರೆ ಅದೇ ಯಜಮಾಂತಿಯೇ ಮಲಗಿಬಿಟ್ರೆ ದೇವರೇ ಗತಿ. ದೇವರೂ ಕಾಪಾಡುವುದಕ್ಕಾಗುಲ್ಲ. ಆಗಲೇ ಹೇಳಿದಂತೆ ಮನೇಲಿ ಎಲ್ಲರೂ ಹುಷಾರು ತಪ್ಪಿದ್ದೇವೆ. ಯಾರನ್ನು ಯಾರು ಸುದಾರಿಸಬೇಕು? ನನ್ನ ಮಕ್ಕಳಿಗೆ ಒಬ್ಬನಿಗೆ ೨೪ ವರ್ಷ, ಒಬ್ಬನಿಗೆ ೨೩ ವರ್ಷ. ದೊಡ್ಡೋನು ಬಿ.ಇ ಮಾಡಿ ಮೈಸೂರಲ್ಲಿ ಕೆಲಸದಲ್ಲಿದ್ದಾನೆ. ಚಿಕ್ಕೊನುದ್ದೂ ಬಿ.ಇ.ಆಗಿದೆ, ಎಂ.ಬಿ.ಎ ಮಾಡ್ತಾ ಇದ್ದಾನೆ. ಹುಷಾರು ಸ್ವಲ್ಪ ತಪ್ಪಿದರೆ ಸಾಕು ಇಬ್ಬರೂ ಎಳೆ ಮಕ್ಕಳಂತೆಯೇ; ಇವತ್ತು ಚಿಕ್ಕವನಿಗೆ ಹುಷಾರು ತಪ್ಪಿದ್ದರಿ೦ದಲೇ ನಮ್ಮ ಗೌರತ್ತೆ ನೆನಪಾದದ್ದು.ನನ್ನ ಮಗನಿಗೆ ಸ್ವಲ್ಪ ಜ್ವರ ತಲೆನೋವು ಬಂದರೆ ಸಾಕು ನನ್ನ ತೊಡೆ ಮೇಲೆ ಮಲಗಿ ಬಿಡ್ತಾನೆ. ಅವನಿಗೆ ನಿದ್ರೆ ಹತ್ತುವ ವರಗೂ ತಲೆ ಸವರುತ್ತಾ ಇರ್ಬೇಕು. ನನಗೂ ಹುಷಾರಿಲ್ಲ. ಇಂತಾ ಸ್ಥಿತಿಯಲ್ಲೂ ಮಗನಿಗೆ ಸುದಾರಿಸಲೇ ಬೇಕಲ್ಲಾ!! ನಿಜವಾಗಲೂ ಇಂತಹ ಸಂದರ್ಭದಲ್ಲಿ ಎಲ್ಲಾ ಯೋಚನೆಗಳೂ ಬರುತ್ತೆ. ನನ್ನ ಬಾಲ್ಯದ ನೆನಪು ಕಾಡುತ್ತೆ. .. . ........... ನನ್ನ ಬಾಲ್ಯ.....ಅದೊಂದು ದೊಡ್ಡ ಅನುಭವ. ...ಕಿತ್ತು ತಿನ್ನುವ ಬಡತನ , ಒಂದೇ ಮಾತಲ್ಲಿ ಹೇಳಬೇಕೂ ಅಂದ್ರೆ ತುತ್ತು ಅನ್ನಕ್ಕೆ ಹಾಹಾಕಾರ. ಇಲ್ವೆ ಇಲ್ಲಾ ! ಆ ಕಾಲವೇ ಹಾಗೆ. ಅಂದರೆ ಸುಮಾರು ನಾಲ್ಕು ದಶಕಗಳ ಹಿಂದಿನ ಮಾತು. ಅವತ್ತಿನ ಬಡತನದ ಬಗೆಗೆ ಸಮಯ ಬಂದಾಗ ಬರೀತೀನಿ. ಆದರೆ ಈಗ ಕೇವಲ ನಮ್ಮ ಗೌರತ್ತೆ ಬಗ್ಗೆ ಮಾತ್ರ ನೆನಪು ಮಾಡಿಕೊಳ್ಳಬೇಕು, ಇವತ್ತಿಗೆ ಅಷ್ಟೆ ಸಾಕು. ಗೌರತ್ತೆ ನಮ್ಮ ಅಪ್ಪನ ಅಕ್ಕ. ಅವಳ ಹತ್ತು ವರ್ಷಕ್ಕೆ ಅರಕಲಗೂಡು ಹತ್ತಿರ ಮಗ್ಗೆಗೆ ಕೊಟ್ಟು ಮದುವೆ ಯಾಗಿತ್ತ೦ತೆ. ಮದುವೆ ಯಾದ ಒ೦ದು ವರ್ಷದಲ್ಲಿ ಗಂಡ ಗೊಟಕ್. ಅವತ್ತಿನಿ೦ದ ಗೌರತ್ತೆ ನಮ್ಮ ಮನೆಯಲ್ಲೇ. ಮದುವೆ ಅ೦ದ್ರೆ ಏನು ಅ೦ತಾ ಗೊತ್ತಾಗುವುದಕ್ಕೆ ಮು೦ಚೆ ವಿಧವೆಯ ಪಟ್ಟ. ಅಬ್ಭಾ ಎಂತಾ ಅನ್ಯಾಯ? ಅವತ್ತಿನಿ೦ದ ಅವಳ ಸ್ವ೦ತ ಜೀವನ ಅ೦ದ್ರೆ ಏನು ಅ೦ತಾ ಅವಳಿಗೆ ಗೊತ್ತೇ ಇಲ್ಲ.ನಮ್ಮಪ್ಪನ ಮದುವೆ ಆಗಿ ನಾವೆಲ್ಲಾ ಹುಟ್ಟಿದಮೇಲೆ ನಮನ್ನು ನಮ್ಮಮ್ಮನಿಗಿ೦ತ ಚೆನ್ನಾಗಿ ಸಲಹಿದ್ದು ನಮ್ಮ ಗೌರತ್ತೆಯೇ. ನಮ್ಮ ಗೌರತ್ತೆ ಸಾಯುವ ವರೆಗೂ ನಮ್ಮ ಮನೆಯ ಮಕ್ಕಳೆಲ್ಲಾ ಬಾರೆ-ಹೋಗೆ ಅಂತಾನೆ ಅ೦ತಿದ್ದು. ಅವರಿಗೆ[ಅವಳಿಗೆ] ಅದೇ ಚೆನ್ನಾ.ನಮ್ಮ ಮನೆಯಲ್ಲಿ ಬಡತನವಿದ್ದರೂ ನಾಲ್ಕಾರು ದನಗಳು ಇದ್ದವು. ಹಾಗಾಗಿ ಕರಾವು ಇತ್ತು. ಅವತ್ತು ಊಟ ಮಾಡಿರಲಿ ಬಿಡಲೀ ಮಲಗುವಾಗ ಎಲ್ಲಾ ಮಕ್ಕಳಿಗೂ ನಮ್ಮ ಗೌರತ್ತೆ ಒಂದು ಬಟ್ಟಲು ಹಾಲು ಕುಡಿಸಿಯೇ ಮಲಗಿಸ್ತಾ ಇದ್ದಳು. ಒ೦ದುವೇಳೆ ನಿದ್ರೆ ಬಂದು ಮಲಗಿದ್ದರೂ ಎಬ್ಬಿಸಿ ಹಾಲು ಕುಡಿಸಿಯೇ ಮಲಗಿಸುತ್ತಿದ್ದಳು. ಸ್ವಲ್ಪಾ ತಲೆನೋವು ಅಂದ್ರೆ ಸಾಕು ತೊಡೆ ಮೇಲೆ ಮಲಗಿಸಿಕೊಂಡು ಹಿತವಾಗಿ ತಲೆ ನೇವರಿಸಿ ನಿದ್ರೆ ಮಾಡಿಸಿದಮೇಲೆ ನಮ್ಮಮ್ಮನನ್ನು ಕರೆದು " ನರಸಮ್ಮಾ, ಮಗುವನ್ನು ಹಾಸಿ ಮಲಗಿಸು, ನಿದ್ರೆ ಮಾಡಿದೆ ಅಂತಾ ಹೇಳಿ, ನಿದಾನವಾಗಿ ಹಾಸಿಗೆಯಲ್ಲಿ ಮಲಗಿಸುತ್ತಿದ್ದರು.[ಹಾಸಿಗೆ ಅ೦ದ್ರೆ ಹೇಗಿತ್ತು ಅನ್ನೋದಕ್ಕೆ ಒ೦ದು ಕಥೆ ಬರೀ ಬೇಕಾಗುತ್ತೆ , ಸಧ್ಯಕ್ಕೆ ಆರುಜನ ಮಕ್ಕಳು, ಅಮ್ಮ, ಅತ್ತೆ, ಅಜ್ಜಿ ಸೇರಿ ಒಂದು ಚಾಪೆಯ ಮೇಲೆ ಒ೦ದು ಹರಕಲು ಜಮಖಾನ.ಅಪ್ಪ ಮಾತ್ರ ಬೇರೆ ಮಲಗ್ತಾ ಇದ್ರು ] ಇನ್ನು ನಮ್ಮಪ್ಪನ ಬಗ್ಗೆ ಅವರಿಗಿದ್ದ ಪ್ರೀತಿ! ಅದನ್ನು ಅಳೆಯಲು ಸಾಧ್ಯವೇ ಇಲ್ಲ. ನಮ್ಮಪ್ಪ ಮಾತ್ರ ಅವರನ್ನು ಸಿಕ್ಕಾಪಟ್ಟೆ ಬೈತಿದ್ರು. ಆದರೆ ನಮ್ಮತ್ತೆ ಮಾತ್ರ ಅವಳ ತಮ್ಮನನ್ನು ಒ೦ದು ದಿನಾ ಬೈಲಿಲ್ಲ.ನಮ್ಮತ್ತೆ ಜೊತೆಗೆ ನಮ್ಮಜ್ಜಿ ,ನಮ್ಮ ದೊಡ್ಡಮ್ಮ ಎಲ್ಲಾ ಸೇರಿ ಐದುಜನ ದೊಡ್ಡೋರು ಮನೇಲಿದ್ರು. ಬಡತನ ಇದ್ದರೂ ಜೀವನಕ್ಕೆ ಸೆಕ್ಯೂರಿಟಿ ಹೇಗಿತ್ತು ಅಂದ್ರೆ ಮನೇಲಿ ಯಾರಿಗಾದರೂ ಹುಷಾರಿಲ್ಲ ಎಂದರೆ ಯೋಚಿಸಲೇ ಬೇಕಿರಲಿಲ್ಲ. ನೋಡೋದಕ್ಕೆ ಸದಾಕಾಲ ನಮ್ಮತ್ತೆ. ಇನ್ನೊಂದು ವಿಷಯ ಹೇಳಲೇ ಬೇಕು-ನಮ್ಮತ್ತೆಗೆ ಅವರು ಸಾಯೋ ವರಗೂ ಹುಶಾರೇ ತಪ್ಪಲಿಲ್ಲ. ಕಾರಣ ಗೊತ್ತೇ? ಅವರ ದೇಹದಬಗ್ಗೆ ಅವರಿಗೆ ಮಮಕಾರವೇ ಇರಲಿಲ್ಲ ವಲ್ಲ. ಅಧ್ಯಾತ್ಮದಲ್ಲಿ ಈ ದೇಹ ನಾನಲ್ಲ ಅಂತಾ ಹೇಳ್ತಾರೆ. ಆದ್ರೆ ಅಮ್ಮತ್ತೆಗೆ ಅಧ್ಯಾತ್ಮ ಅಂದ್ರೆ ಗೊತ್ತಿರಲಿಲ್ಲ. ಅವರಿಗೆ ಗೊತ್ತಿದ್ದ ವಿಷಯ ಅಂದ್ರೆ ಅವರ ತಮ್ಮನ ಮಕ್ಕಳು ಅಲ್ಲಲ್ಲ ಅವರ ಮಕ್ಕಳು ಸುಖವಾಗಿರಲಿ- ಎಂಬುದು ಅಷ್ಟೆ. ಈಗ....ನಮ್ಮಪ್ಪ ಅಮ್ಮಾ , ನಮ್ಮತ್ತೆ ಕೂಡ ಇಲ್ಲ. ಹೋಗಿ ೮-೧೦ ವರ್ಷ ವಾಯ್ತು. ಜೀವನಕ್ಕೆ ಯೋಚನೆ ಇಲ್ಲ. ಆದರೆ ಗೌರತ್ತೆ ಅಂತಾ ತಾಯಿ ಇಲ್ಲದಿರುವ ಕೊರತೆ ನಿತ್ಯವೂ ಕಾಡುತ್ತೆ. ಒಲೆಗೊ೦ದು ಒದೆಗೊರಡು ,ಮನೆಗೊ೦ದು ಮುದಿಗೊರದು ಇರಬೇಕೂ ಅಂತಾ ನಮ್ಮಮ್ಮ ಹೇಳ್ತಾ ಇದ್ದರು.

ಬುಧವಾರ, ಮೇ 23, 2012

ಚಿ||ರಾ||ಅಕ್ಷಯ್ ಹಾಡುಗಾರಿಕೆ

ಏಳನೇ ತರಗತಿಯಲ್ಲಿ ಓದುತ್ತಿರುವ ಚಿ||ರಾ||ಅಕ್ಷಯ್ ಹಾಡುಗಳನ್ನು ಕೇಳಿ. ಕಿರಿಯ ಕಲಾವಿದನಿಗೆ ಪ್ರೋತ್ಸಾಹಿಸಿ.

ಸಮಾಜ ಸ್ಮರಣೆ ಸಮಾರಂಭ

ಚಿ||ರಾ|| ಶ್ರೀಕಂಠ ಮತ್ತು ಚಿ||ಸೌ||ರಶ್ಮಿ ಇವರ ವಿವಾಹ ಸಂದರ್ಭದಲ್ಲಿ ದಿನಾಂಕ 12.5.2012  ರಂದು ಹಾಸನದಲ್ಲಿ ನಡೆದ ಸಮಾಜಸ್ಮರಣೆ ಸಮಾರಂಭದ ದೃಶ್ಯಗಳು
ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಮಾಡಿದ ಕು||ಸ್ವಾತಿ
ಸಮಾಜ ಸ್ಮರಣೆ ಕಾರ್ಯಕ್ರಮದಲ್ಲಿ  ತನ್ನ ಮಧುರ ಕಂಠದಿಂದ ರಂಜಿಸಿದ        ಚಿ||ರಾ||ಅಕ್ಷಯ್  

ಶ್ರೀ ನಾಗೇಶ್ ಇವರಿಂದ ನಲ್ನುಡಿ

 "ಸಮಾಜ ಋಣ"  ಉಪನ್ಯಾಸ ನೀಡಿದ    ಅನಂತ ನಾರಾಯಣ್ ಅವರಿಗೆ      ಶ್ರೀ ರಾಮಕೃಷ್ಣರಿಂದ ಫಲ ಸಮರ್ಪಣೆ

ಕಾರ್ಯಕ್ರಮ ನಿರ್ವಹಣೆ ಮಾಡಿದ ಶ್ರೀ ಕವಿನಾಗರಾಜ್ ರಿಗೆ ಶ್ರೀ ರಮೇಶ್ ರಿಂದ ಫಲ ಸಮರ್ಪಣೆ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಾಸನ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ರಾದ ಶ್ರೀ ಶ್ರೀನಿವಾಸರಿಗೆ ಶ್ರೀ ಮೋಹನ್ ರಿಂದ ಫಲ ಸಮರ್ಪಣೆ

"ವಿವಾಹ ಮಹತ್ವ" ಉಪನ್ಯಾಸ ನಡೆಸಿಕೊಟ್ಟ  ಡಾ.ಶ್ರೀ ವತ್ಸ.ಎಸ್. ವಟಿಯವರಿಗೆ ಶ್ರೀ ಶ್ರೀಕಂಠಮೂರ್ತಿ ಇವರಿಂದ ಫಲ ಸಮರ್ಪಣೆ


ರಾ.ಸ್ವ. ಸಂಘದ ಜಿಲ್ಲಾ ಕಾರ್ಯವಾಹರಾದ ಶ್ರೀ ವಿಜಯ್ ಕುಮಾರ್ ಮತ್ತು  ಹಿರಿಯ ಕಾರ್ಯಕರ್ತರಾದ ಶ್ರೀ ರಮೇಶ್ ಇವರಿಗೆ ಹರಿಹರಪುರಶ್ರೀಧರರಿಂದ "ಮಂಗಲ ನಿಧಿ" ಸಮರ್ಪಣೆ

ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲೂ ತಮ್ಮನ್ನು  ಪೂರ್ಣವಾಗಿ ತೊಡಗಿಸಿಕೊಂಡು ಯಶಸ್ಸಿಗೆ ಕಾರಣರಾದ ಶ್ರೀಮತಿ ಲಲಿತಾ ಮತ್ತು ಶ್ರೀ ರಮೇಶ್ ದಂಪತಿಗಳಿಗೆ ಮನೆಯ ಹಿರಿಯರಾದ  ಶ್ರೀಮತಿ ಉಮಾ ಮತ್ತು ಶ್ರೀ ನಾಗೇಶ್ ಇವರಿಂದ ಗೌರವಾರ್ಪಣೆ

ಹರಿಹರಪುರಶ್ರೀಧರರಿಂದ ಪ್ರಾಸ್ತಾವಿಕ ನುಡಿ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಾಸನ ಆಕಾಶವಾಣಿಯ ಕಾರ್ಯಕ್ರಮನಿರ್ವಾಹಕರಾದ ಶ್ರೀ ಶ್ರೀನಿವಾಸರಿಂದ ಅಧ್ಯಕ್ಷರ ನುಡಿ


ತಮ್ಮ ಮಧುರ ಕಂಠದಿಂದ ಸಂಗೀತ ಸುಧೆಯನ್ನು ಹರಿಸಿದ ಶ್ರೀಮತಿ ಸುಧಾ ನಟರಾಜ್


ಅಪ್ಪ ಅಮ್ಮನ ಆದರ್ಶದಂತೆ ಸಮಾಜಮುಖಿ  ಜೀವನ ನಡೆಸುತ್ತಿರುವ    ಶ್ರೀಮತಿ ಸ್ವರ್ಣ ರಾಮಕೃಷ್ಣ ದಂಪತಿಗಳಿಗೆ  ಶ್ರೀಮತಿ ಸರ್ವಮಂಗಳ ಮತ್ತು ಶ್ರೀಧರರಿಂದ ಗೌರವಾರ್ಪಣೆ

ಆಶೀರ್ವಾದ  ಪತ್ರ ವಾಚನ-ಶ್ರೀಮತಿ ಲಲಿತಾರಮೇಶ್ ಇವರಿಂದ

ನವ ದಂಪತಿಗಳಾದ ಚಿ||ಸೌ||ರಶ್ಮಿ ಮತ್ತು ಚಿ||ರಾ|| ಶ್ರೀಕಂಠ

ಸಮಾರಂಭದಲ್ಲಿ ಪಾಲ್ಗೊಂಡವರ  ಒಂದು ನೋಟ

ಸಮಾರಂಭದಲ್ಲಿ ಪಾಲ್ಗೊಂಡವರ  ಮತ್ತೊಂದು  ನೋಟ

ಶನಿವಾರ, ಮೇ 19, 2012

ಚಿ||ರಾ|| ಶ್ರೀಕಂಠನ ವಿವಾಹ

ಶ್ರೀಯುತ ಕವಿ ನಾಗರಾಜರಿಂದ ಪ್ರಾಸ್ತಾವಿಕ


ನನ್ನ ಪುತ್ರ ಚಿ||ರಾ|| ಶ್ರೀಕಂಠನ ವಿವಾಹವು ಚಿ||ಸೌ|| ರಶ್ಮಿಯೊಡನೆ ದಿನಾಂಕ 7.5.2012 ರಂದು ಬೆಂಗಳೂರಿನಲ್ಲಿ ನಡೆಯಿತು.ನಂತರ ಹಾಸನದಲ್ಲಿ ಆರತಕ್ಷತೆ, ಸಮಾಜಸ್ಮರಣೆಕಾರ್ಯಕ್ರಮ, ರುದ್ರಾಭಿಶೇಕ, ಹಾಸನದ ವೃದ್ಧಾಶ್ರಮ ಬಂಧುಗಳೊಡನೆ ಭೋಜನ ಇತ್ಯಾದಿ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದ ಕೆಲವು ಚಿತ್ರಗಳನ್ನು ಮತ್ತು ಸಮಾಜ ಸ್ಮರಣೆ ಕಾರ್ಯಕ್ರಮದ ಪ್ರಾರ್ಥನೆಯ ಧ್ವನಿ ಕ್ಲಿಪ್ ಮತ್ತು ಉಪನ್ಯಾಸದ ಕ್ಲಿಪ್ ಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಶ್ರೀಯುತ ಅನಂತನಾರಾಯಣರು ಮಾಡಿರುವ ಉಪನ್ಯಾಸವು ಇಂದಿನ ಯುವಕರಿಗೆ ಅತ್ಯಂತ ಉಪಯುಕ್ತವಾಗಿದೆ. ವಿವಾಹದ ಮಹತ್ವ ಕುರಿತು ಡಾ. ಶ್ರೀವತ್ಸ ಎಸ್. ವಟಿಯವರು ಮಾಡಿರುವ ಉಪನ್ಯಾಸವನ್ನು ಇನ್ನೂ ಹಲವು ಚಿತ್ರಗಳೊಡನೆ ಶೀಘ್ರದಲ್ಲಿಯೇ ಇಲ್ಲಿ  ಪ್ರಕಟಿಸಲಾಗುವುದು

.

ಶ್ರೀಮತಿ ಸುಧಾನಟರಾಜ್ ರಿಂದ ಸಂಗೀತಸುಧೆ


ಶ್ರೀಯುತ ಅನಂತನಾರಾಯಣರಿಂದ ಉಪನ್ಯಾಸ"ಸಮಾಜಋಣ"




ಶ್ರೀಕಂಠನ ಪಕ್ಕದಲ್ಲಿ ಶ್ರೀ ಕವಿನಾಗರಾಜ್ ಮತ್ತು ಶ್ರೀಕಂಠನ ಮಾವ ಶ್ರೀ ವೆಂಕಟೇಶ್ ರಶ್ಮಿಯ ಪಕ್ಕದಲ್ಲಿ ಅವರ ತಾಯಿ ಶ್ರೀಮತಿ ಸಾವಿತ್ರಿ ಮತ್ತು  ಶ್ರೀಮತಿ ಭಾರತೀ ನಾಗರಾಜ್

ಶ್ರೀ ಶಂಕರ ಮಠದ ಧರ್ಮಾಧಿಕಾರಿಗಳಾದ ಶ್ರೀ ಎಮ್.ಎಸ್.ಶ್ರೀಕಂಠಯ್ಯ ದಂಪತಿಗಳೊಡನೆ


ಶ್ರೀಮತಿ ಸರ್ವಮಂಗಳ ಇವರ ತಾಯಿ ಮತ್ತು ಕುಟುಂಬ

ಶ್ರೀಧರ್ ಅವರ ಸೋದರ ಸೋದರಿಯರು ಮತ್ತು  ಕುಟುಂಬ



ಹರಿಹರಪುರ ಶ್ರೀಧರರಿಂದ ಸ್ವಾಗತನುಡಿ

 




ಡಾ.ಶ್ರೀವತ್ಸ ಎಸ್.ವಟಿಯವರ ಉಪನ್ಯಾಸ" ವಿವಾಹ ಮಹತ್ವ"

ಶುಕ್ರವಾರ, ಜನವರಿ 6, 2012

ಹರಿಹರಪುರ ಶ್ರೀಧರ್ ಮತ್ತು ಕವಿಮನೆತನದ ಸಮಾವೇಶ


     ಮಿತ್ರ ಶ್ರೀಧರ್ ಮತ್ತು ನನ್ನ ಸ್ನೇಹ ಕಳೆದ ನಾಲ್ಕು ದಶಕಗಳದ್ದು. ಕೆಲವು ತಾತ್ವಿಕ ವಿಷಯಗಳಲ್ಲಿ ಸಣ್ಣಪುಟ್ಟ ಅಭಿಪ್ರಾಯ ಬೇಧಗಳಿದ್ದರೂ ಅದರಿಂದ ನಮ್ಮ ಸ್ನೇಹಕ್ಕೆ ಭಂಗ ಬಂದಿಲ್ಲ. ಯಾವುದೇ ಒಳ್ಳೆಯ ಸಂಗತಿಗಳು, ವಿಚಾರಗಳಿಗೆ ಸ್ಪಂದಿಸುವ ಮನೋಭಾವದ ಶ್ರೀಧರ್ ಸತ್ಸಂಗಗಳನ್ನು ನಡೆಸುವಲ್ಲಿ ಹೆಚ್ಚಿನ ಆಸಕ್ತಿ ವಹಿಸಿರುವ ಅವರು ಸಾಧು-ಸಂತರನ್ನು ಕರೆಯಿಸಿ ಉಪನ್ಯಾಸಗಳನ್ನು ಏರ್ಪಡಿಸುವುದಲ್ಲದೆ ಉಪನ್ಯಾಸಗಳ ಆಡಿಯೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿಕೊಂಡು ವೇದಸುಧೆ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿ ಹೆಚ್ಚಿನ ಜನರಿಗೆ ಸದ್ವಿಚಾರ ತಲುಪಿಸುತ್ತಿರುವುದು ಅವರ ಕಳಕಳಿಗೆ ಸಾಕ್ಷಿ. ಸತ್ಸಂಗಕ್ಕಾಗಿಯೇ ಅವರ ಮನೆಯ ಮೇಲ್ಭಾಗದಲ್ಲಿ ಒಂದು ದೊಡ್ಡ ಸಭಾಂಗಣವನ್ನೇ ಕಟ್ಟಿಸಿ ಸಜ್ಜುಗೊಳಿಸಿರುವುದು ಅವರ ವಿಶೇಷತೆ. ವೇದಸುಧೆ ಅಂತರ್ಜಾಲ ತಾಣಕ್ಕೆ ನನ್ನನ್ನು ಗೌರವ ಸಂಪಾದಕನೆಂದು ಹೆಸರಿಸಿರುವುದು ಅವರು ನನ್ನಲ್ಲಿಟ್ಟ ವಿಶ್ವಾಸಕ್ಕೆ ದ್ಯೋತಕವಾಗಿದೆ. ಅವರು ನನ್ನನ್ನು ಅಣ್ಣನಂತೆ ಭಾವಿಸಿದ್ದಾರೆ. ನಾನೂ ಶ್ರೀಧರರನ್ನು ತಮ್ಮನಂತೆಯೇ ಕಂಡಿದ್ದೇನೆ. 


     25-12-2011ರಂದು ಹಾಸನದಲ್ಲಿ ನಡೆದ ಕವಿಮನೆತನದವರ ಮತ್ತು ಬಂಧು-ಬಳಗದವರ ಸಮಾವೇಶದ ವಿಶೇಷ ಆಹ್ವಾನಿತರಾದ ಸನ್ಮಾನ್ಯ ಶ್ರೀ ಸು.ರಾಮಣ್ಣ, ಮುಖ್ಯ ಅತಿಥಿ ಶ್ರೀ ಕೆಳದಿ ಗುಂಡಾಜೋಯಿಸರು ಮತ್ತು ಸೋದರ ಕವಿಸುರೇಶರನ್ನು ಸಮಾವೇಶದ ಹಿಂದಿನ ದಿನ ತಮ್ಮ ಮನೆಯಲ್ಲಿಯೇ ಉಳಿಸಿಕೊಂಡು ಸತ್ಕರಿಸಿದ್ದು ಅವರು ಸಮಾವೇಶದ ಕೆಲಸದಲ್ಲಿ ಹೇಗೆ ತೊಡಗಿಕೊಂಡಿದ್ದರು ಎಂಬುದನ್ನು ತೋರಿಸುತ್ತದೆ. ಅಲ್ಲದೆ ಹೆಚ್ಚಿನ ಬಂಧುಗಳನ್ನು ತಮ್ಮ ಮನೆಗೂ ಕಳುಹಿಸುವಂತೆ ನನಗೆ ಹೇಳಿದ್ದರು. ಸಮಾವೇಶದ ದೃಷ್ಯಗಳನ್ನು ಸೆರೆ ಹಿಡಿಯುವುದು, ವಿಡಿಯೋ ಚಿತ್ರೀಕರಿಸಿರುವುದು, ಅದನ್ನು 'ಬಂಧು-ಬಳಗ' ಎಂಬ ಅಂತರ್ಜಾಲ ತಾಣದಲ್ಲಿ ಪ್ರಚುರಪಡಿಸಿ ಸಮಾವೇಶದ ನೆನಪು ಬಹಳ ಕಾಲ ಉಳಿಯುವಂತೆ ಮಾಡಿರುವುದಕ್ಕಾಗಿ ಅವರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು.

ಬುಧವಾರ, ಜನವರಿ 4, 2012

ಸಾಧನಾ ಪಥದಲ್ಲಿ ಕೆಳದಿಕವಿಮನೆತನ


"ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ ನಡೆಯುವಾ
  ಭಿನ್ನ ಭಾವ ಮರೆಯುವಾ ದೇಶಕಾಗಿ ದುಡಿಯುವಾ"
     ದಿನಾಂಕ 25-12-2011ರಂದು ಹಾಸನದಲ್ಲಿ ಕೆಳದಿ ಕವಿಮನೆತನದವರ ಹಾಗೂ ಅವರ ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶ ಉದ್ದೇಶ ಸಾಧನೆಯಲ್ಲಿ ಯಶಸ್ಸು ಕಂಡಿತೆಂದರೆ ಉತ್ಪ್ರೇಕ್ಷೆಯಲ್ಲ. ಇಂದಿನ ವ್ಯವಸ್ಥೆಯಲ್ಲಿ 'ನಾವಾಯಿತು, ನಮ್ಮ ಸ್ವಂತ ಕುಟುಂಬದ ವಿಷಯವಾಯಿತು, ಇತರ ವಿಷಯಗಳಿಗೆ ಪುರುಸೊತ್ತಿಲ್ಲ' ಎನ್ನುವ ಮನಸ್ಥಿತಿಯವರೇ ಬಹಳವಿದ್ದಾಗ ಎಲ್ಲರನ್ನೂ ಜೊತೆಗೂಡಿಸಿ ಸಜ್ಜನಶಕ್ತಿಯ ಜಾಗರಣೆ ಮಾಡುವ ಮತ್ತು ಅದರಲ್ಲಿ ಪ್ರಗತಿ ಕಾಣುವ ಕೆಲಸ ಸುಲಭವೇನಲ್ಲ. ದೂರ ದೂರದ ಊರುಗಳಿಂದ ಬಂದಿದ್ದ 150 ಬಂಧುಗಳು ಅಂದು ಒಟ್ಟಿಗೆ ಸೇರಿ ಸಂಭ್ರಮಿಸಿದ ದಿನ. ಹಿರಿಯರಾದ ಶ್ರೀ ಸಾ.ಕ. ಕೃಷ್ಣಮೂರ್ತಿಯವರ ಆಶೀರ್ವಾದದೊಂದಿಗೆ ಸಂಚಾಲಕರುಗಳಾಗಿ ಹಾಸನದ ಶ್ರೀ ಕ.ವೆಂ. ನಾಗರಾಜ್ ಮತ್ತು ಶಿವಮೊಗ್ಗದ ಶ್ರೀ ಕವಿಸುರೇಶರ ಪ್ರಯತ್ನ, ಆಯೋಜಕರಾಗಿ ಶ್ರೀಮತಿ ಮತ್ತು ಶ್ರೀ ಕುಮಾರಸ್ವಾಮಿಯವರು ಕೈಜೋಡಿಸಿದುದು, ಮಿತ್ರ ಹರಿಹರಪುರ ಶ್ರೀಧರರ ನೆರವು, ಸ್ಪಂದಿಸಿದ ಬಂಧುವರ್ಗದಿಂದಾಗಿ ಭಾಗವಹಿಸಿದವರೆಲ್ಲರಿಗೆ ಸ್ಮರಣೀಯ ಸಮಾವೇಶವೆನಿದ್ದು ಸುಳ್ಳಲ್ಲ. ಸಮಾವೇಶದ ಸಂಕ್ಷಿಪ್ತ ನೋಟ ನಿಮಗಾಗಿ, ಇದೋ ಇಲ್ಲಿ!
     ಸಮಯಪಾಲನೆಗೆ ಮಹತ್ವ ನೀಡಿ ಸರಿಯಾಗಿ 10-00 ಘಂಟೆಗೆ ಕಾರ್ಯಕ್ರಮ ಆರಂಭಿಸಲಾಯಿತು. ಅದಕ್ಕೆ ಮುಂಚೆ ಬಂದಿದ್ದವರೆಲ್ಲರಿಗೆ ರುಚಿರುಚಿಯಾದ ಉಪಹಾರದ ವ್ಯವಸ್ಥೆಯಾಗಿತ್ತು. ವೇದಿಕೆಯಲ್ಲಿ ಮನೆತನದ ಅತ್ಯಂತ ಹಿರಿಯ ಸದಸ್ಯರಾದ ಬೆಂಗಳೂರಿನ ಶ್ರೀ ಸಾ.ಕ. ಕೃಷ್ಣಮೂರ್ತಿಯವರನ್ನು ಅಧ್ಯಕ್ಷರಾಗಿ, ಮುಖ್ಯ ಅತಿಥಿಯಾಗಿ ಹಾಸನದ ಶ್ರೀ ರಾಮಕೃಷ್ಣ ವಿದ್ಯಾಲಯ ಸಂಸ್ಥೆಗಳ ಸ್ಥಾಪಕ ಮುಖ್ಯಸ್ಥರು, ವಿಶೇಷ ಅತಿಥಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು ಮತ್ತು ಕುಟುಂಬ ಪ್ರಭೋದನ್ ಸಂಸ್ಥೆಯ ಸಂಯೋಜಕರಾದ ಶ್ರೀ ಸು. ರಾಮಣ್ಣನವರು ಮತ್ತು ಸಮಾವೇಶದ ಆಯೋಜಕ ದಂಪತಿಗಳಾದ ಶ್ರೀಮತಿ ಗಿರಿಜಾಂಬಾ ಮತ್ತು ಶ್ರೀ ಕುಮಾರಸ್ವಾಮಿಯವರುಗಳನ್ನು ಆಸೀನಗೊಳಿಸಲಾಯಿತು. ಕುಮಾರಿ ಸ್ಫೂರ್ತಿಆತ್ರೇಯಳ ಗಣೇಶ ಸ್ತುತಿ ನೃತ್ಯದೊಂದಿಗೆ ಶುಭಾರಂಭವಾದರೆ, ವೇದಿಕೆಯಲ್ಲಿದ್ದ ಗಣ್ಯರು ಜ್ಯೋತಿ ಬೆಳಗಿಸಿ ಸಮಾವೇಶದ ಉದ್ಘಾಟನೆ ಮಾಡಿದರು.
ವೇದಿಕೆಯಲ್ಲಿ: ಶ್ರೀ/ಶ್ರೀಮತಿ:  ಸಾ.ಕ.ಕೃಷ್ಣಮೂರ್ತಿ, ಸು.ರಾಮಣ್ಣ, ಸಿ.ಎಸ್.ಕೃಷ್ಣಸ್ವಾಮಿ, ಗಿರಿಜಾಂಬಾ, ಕುಮಾರಸ್ವಾಮಿ
ನಿರೂಪಕಿ: ಬಿಂದು ರಾಘವೇಂದ್ರ
ಸ್ಫೂರ್ತಿಆತ್ರೇಯಳಿಂದ ಗಣೇಶ ಸ್ತುತಿ ನೃತ್ಯ 
  ಕಳೆದ ವರ್ಷ ವಿಧಿವಶರಾದ ಬೆಂಗಳೂರಿನ ಅಡ್ವೋಕೇಟ್ ಶ್ರೀ ಬಿ.ಎನ್. ಲಕ್ಷ್ಮಣರಾವ್, ಹಾಸನ ತಾ. ನಿಟ್ಟೂರಿನ ನಿವೃತ್ತ ಉಪಾಧ್ಯಾಯ ಶ್ರೀ ರಾಮರಾವ್ ಮತ್ತು ಬೀರೂರಿನ ಶ್ರೀಮತಿ ವಿಮಲಮ್ಮಶೇಷಗಿರಿರಾವ್ ಇವರುಗಳ ಆತ್ಮಗಳಿಗೆ ಸದ್ಗತಿ ಕೋರಿ ಎರಡು ನಿಮಿಷಗಳ ಕಾಲ ಮೌನ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಾಸನದ ಶ್ರೀ ಬಿ.ಎನ್. ಸತ್ಯಪ್ರಸಾದರವರು ವೇದಿಕೆಯಲ್ಲಿದ್ದ ಗಣ್ಯರ ಪರಿಚಯ ಮಾಡಿಕೊಡುವುದರೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು.

ಶ್ರೀ ಬಿ.ಎನ್.ಸತ್ಯಪ್ರಸಾದರಿಂದ ಸ್ವಾಗತ, ಪರಿಚಯ
        'ಕವಿಕಿರಣ' ಪತ್ರಿಕೆಯ ಸಂಪಾದಕ ಶ್ರೀ ಕ.ವೆಂ. ನಾಗರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸಮಾವೇಶಗಳ ಹಿನ್ನೆಲೆ, ಕಾರ್ಯಕ್ರಮಗಳ ಮಹತ್ವ, ಕವಿಕಿರಣ ಪತ್ರಿಕೆಯ ಧ್ಯೇಯೋದ್ದೇಶ, ಕವಿಪ್ರಕಾಶನದ ಪ್ರಕಟಣೆಗಳು, ಇತ್ಯಾದಿ ಸಂಗತಿಗಳ ಕುರಿತು ವಿವರಿಸಿ ಸಾಧನಾಪಥದಲ್ಲಿ ಮುನ್ನಡೆದು ಮನೆತನದ ಪರಂಪರೆಯನ್ನು ಉಳಿಸಿ ಬೆಳೆಸಲು ಕರೆ ನೀಡಿದರು.
ಶ್ರೀ ಕ.ವೆಂ.ನಾಗರಾಜರಿಂದ ಪ್ರಾಸ್ತಾವಿಕ ನುಡಿ

     "ನಮ್ಮ ಕುಟುಂಬ-ನಾವು-ನಮ್ಮವರು-ನಮ್ಮ ಮನೆ" ಎಂಬ ವಿಷಯದಲ್ಲಿ ಶ್ರೀ ಸು.ರಾಮಣ್ಣನವರು ನಡೆಸಿಕೊಟ್ಟ ಸಂವಾದ ಕಾರ್ಯಕ್ರಮ ಸಮಾವೇಶದ ಪ್ರಮುಖ ಅಂಗವಾಗಿತ್ತು ಮತ್ತು ಪ್ರಭಾವಿಯಾಗಿತ್ತು. ಒಂದು ಮಾದರಿ ಕುಟುಂಬ ಹೇಗಿರಬೇಕು ಎಂಬ ಬಗ್ಗೆ ಒಂದು ಹಾಡನ್ನು ಹೇಳಿಕೊಟ್ಟು ಎಲ್ಲರಿಂದಲೂ ಹೇಳಿಸುವುದರಿಂದ ಪ್ರಾರಂಭವಾದ ಸಂವಾದದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡರು, ಪ್ರೇರಣೆ ಪಡೆದರು. ಹೆಚ್ಚಿನವರಿಗೆ ಇದು ಒಂದು ವಿಭಿನ್ನ ಕಾರ್ಯಕ್ರಮವೆನಿಸಿದ್ದು, ಈ ಸಂವಾದ ನೀಡಿದ ಸಂದೇಶದ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
ಸಂವಾದ ನಡೆಸುತ್ತಿರುವ ಶ್ರೀ ಸು.ರಾಮಣ್ಣನವರು
ಇವರುಗಳೂ ಸಂವಾದದಲ್ಲಿ ಭಾಗಿಗಳು
ಶ್ರೀ ಸು.ರಾಮಣ್ಣನವರಿಗೆ ಸನ್ಮಾನ
     ಕವಿಮನೆತನದ ಮೂಲಪುರುಷ ಲಿಂಗಣ್ಣಕವಿಯ ಐತಿಹಾಸಿಕ ಕಾವ್ಯ ಕೆಳದಿನೃಪ ವಿಜಯದ ಇಂಗ್ಲಿಷ್ ಗದ್ಯಾನುವಾದ Keladi Nrupa Vijaya’  ಅನ್ನು ಮುಖ್ಯ ಅತಿಥಿ ಶ್ರೀ ಕೃಷ್ಣಸ್ವಾಮಿಯವರು ಬಿಡುಗಡೆಗೊಳಿಸಿ ಈ ಕೃತಿ ಸಾರಸ್ವತ ಲೋಕಕ್ಕೆ ಒಳ್ಳೆಯ ಕೊಡುಗೆಯಾಗಿದೆ ಎಂದು ಶ್ಲಾಘಿಸಿದರು. ಕೃತಿ ಪರಿಚಯವನ್ನು ಸಾಗರದ ಶ್ರೀಮತಿ ಸುಮನಾವೆಂಕಟೇಶ ಜೋಯಿಸ್ ಮಾಡಿಕೊಟ್ಟರು. ಲೇಖಕ ಸುರೇಶರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕವಿ ಸುರೇಶ್ ಮಾತನಾಡಿ ತಮಗೆ ಇದು ಸ್ಮರಣೀಯವಾಗಿದೆಯೆಂದು ತಿಳಿಸಿ, ಈ ಕೃತಿ ತಮ್ಮ ಜೀವಮಾನದಲ್ಲಿ ಮಾಡಿದ ನೆನಪಿಟ್ಟುಕೊಳ್ಳುವ ಕೆಲಸವಾಗಿದೆಯೆಂದರು. ಕವಿಕಿರಣದ ಡಿಸೆಂಬರ್, ೨೦೧೧ ರ ಸಂಚಿಕೆಯನ್ನೂ ಬಿಡುಗಡೆಗೊಳಿಸಿ ಬಂದವರೆಲ್ಲರಿಗೆ ವಿತರಿಸಲಾಯಿತು. ಕ.ವೆಂ.ನಾಗರಾಜರ ಚಿಂತನಶೀಲ ಮುಕ್ತಕಗಳಿರುವ ಪುಸ್ತಕ ಮೂಢ ಉವಾಚದ ಪ್ರತಿಗಳನ್ನೂ ಸಹ ಬಂಧುಗಳಿಗೆ ಉಚಿತವಾಗಿ ನೀಡಲಾಯಿತು.
ಕವಿಸುರೇಶರ ಆಂಗ್ಲಭಾಷೆಯ ಕೃತಿ 'ಕೆಳದಿನೃಪ ವಿಜಯ'ದ ಬಿಡುಗಡೆ
ಶ್ರೀಮತಿ ಸುಮನಾ ವೆಂಕಟೇಶಜೋಯಿಸರಿಂದ ಕೃತಿ ಪರಿಚಯ
ಲೇಖಕ ಕವಿಸುರೇಶರ ಮಾತು
ಲೇಖಕರಿಗೆ ಸನ್ಮಾನ
'ಕವಿಕಿರಣ'ದ ಡಿಸೆಂಬರ್ ಸಂಚಿಕೆ ಬಿಡುಗಡೆ
ಮುಖ್ಯ ಅತಿಥಿಗಳ ಮೆಚ್ಚುಗೆಯ ನುಡಿಗಳು
     ಹಿರಿಯರಾದ ಬೆಂಗಳೂರಿನ ಶ್ರೀಮತಿ ಸುಬ್ಬಲಕ್ಷ್ಮಮ್ಮಸುಬ್ಬರಾವ್, ಶಿವಮೊಗ್ಗದ ಶ್ರೀಮತಿ ಸೀತಾಲಕ್ಷ್ಮಮ್ಮಕೃಷ್ಣಮೂರ್ತಿ ಮತ್ತು ಕೆಳದಿಯ ಶ್ರೀ ಗುಂಡಾಜೋಯಿಸರನ್ನು ಅತ್ಯಂತ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಮಾತನಾಡಿದ ಶ್ರೀ ಗುಂಡಾಜೋಯಿಸರು ಹೊರಗಿನವರ ಸನ್ಮಾನಕ್ಕಿಂತ ಬಂಧುಗಳು ಮಾಡಿದ ಸನ್ಮಾನ ತಮಗೆ ತುಂಬಾ ಸಂತೋಷ ನೀಡಿದೆಯೆಂದು ಕೃತಜ್ಞತೆ ಅರ್ಪಿಸಿದರು. ಶ್ರೀ ಕುಮಾರಸ್ವಾಮಿಯವರು ಮಾತನಾಡುತ್ತಾ ಭಾವುಕರಾಗಿದ್ದು ಸಮಾವೇಶದ ಯಶಸ್ಸು ಬಿಂಬಿಸಿತ್ತು. ಆಯೋಜಕರು, ಸಮಾವೇಶಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.
ಶ್ರೀಮತಿ ಸುಬ್ಬಲಕ್ಷ್ಮಮ್ಮಸುಬ್ಬರಾಯರನ್ನು ಸನ್ಮಾನಿಸಿದಾಗ ಸಂಭ್ರಮಿಸಿದ ಬಂಧುಗಳು
ಶ್ರೀಮತಿ ಸೀತಾಲಕ್ಷ್ಮಮ್ಮ ಕೃಷ್ಣಮೂರ್ತಿಯವರನ್ನು ಸನ್ಮಾನಿಸಿದಾಗ
ಶ್ರೀ ಕೆಳದಿ ಗುಂಡಾಜೋಯಿಸರನ್ನು ಸನ್ಮಾನಿಸಿದಾಗ ಹಿಗ್ಗಿದ ಕುಟುಂಬವರ್ಗ
ಸಮಾವೇಶದ ಅಯೋಜಕರ ಬಂಧುವರ್ಗದ ಸಂಭ್ರಮ
ಸಹಕಾರಿಗಳು ಶ್ರೀ ಹರಿಹರಪುರ ಶ್ರೀಧರ ದಂಪತಿಗಳಿಗೆ ಅಭಿನಂದನೆ
ಸಹಕಾರಿ ಶ್ರೀ ಪಾಂಡುರಂಗ, ಹಾಸನ ಇವರಿಗೆ ಅಭಿನಂದನೆ
     ಇದೇ ಸಂದರ್ಭದಲ್ಲಿ ಒಂದು ಪ್ರದರ್ಶಿನಿ ಏರ್ಪಡಿಸಿದ್ದು ಇದರಲ್ಲಿ ಕವಿಮನೆತನದವರು ರಚಿಸಿದ ಕಲಾಕೃತಿಗಳು, ವರ್ಣಚಿತ್ರಗಳು, ಪುಸ್ತಕಗಳು, ಭಾವಚಿತ್ರಗಳು ಇತ್ಯಾದಿಗಳನ್ನು ಪ್ರದರ್ಶಿಸಲಾಗಿದ್ದು ಇದು ಇತರರಿಗೂ ಸಹ ಏನನ್ನಾದರೂ ಮಾಡಲು ಪ್ರೇರೇಪಿಸಲು ಸಹಕಾರಿಯಾಯಿತು ಎಂಬುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಶ್ರೀ ಸಾ.ಕ.ಕೃಷ್ಣಮೂರ್ತಿಯವರು ಚಿತ್ರಗಳನ್ನು ಪ್ಲೈವುಡ್ ಮೇಲೆ ಅಂಟಿಸಿ ಕಲಾರಚನೆಗೆ ಅನುಗುಣವಾಗಿ ಕತ್ತರಿಸಿ ಸಿದ್ಧಪಡಿಸಿದ ಕೃತಿಗಳು ಗಮನ ಸೆಳೆದವು.
 ಪ್ರದರ್ಶಿನಿಯ ಕೆಲವು ದೃಷ್ಯಗಳು


     ಬೆಂಗಳೂರಿನ ಶ್ರೀಮತಿ ಸುಮಾರಾಜೇಶ್, ಕುಮಾರಿಯರಾದ ಸ್ಫೂರ್ತಿಆತ್ರೇಯ ಮತ್ತು ಲಕ್ಷ್ಮಿಶ್ರೀಭಾರದ್ವಾಜರವರುಗಳಿಂದ ನಡೆದ ಭರತನಾಟ್ಯ ಕಾರ್ಯಕ್ರಮ ಕಲಾರಸಿಕರಿಗೆ ಮನದಣಿಸುವಲ್ಲಿ ಯಶಸ್ವಿಯಾಯಿತು. ಶ್ರೀಮತಿ ಸುಮಾರಾಜೇಶರು ಬೆಂಗಳೂರಿನಲ್ಲಿ ಸ್ಫೂರ್ತಿ ನಾಟ್ಯಶಾಲೆ ನಡೆಸುತ್ತಿದ್ದು ಹೆಸರಾಂತ ಕಲಾವಿದೆಯಾಗಿದ್ದಾರೆ. ಕುಮಾರಿ ಪಲ್ಲವಿ ಸತ್ಯಪ್ರಸಾದರ ಹಾಡುಗಾರಿಕೆ ಕೇಳುಗರಿಗೆ ಹಿತವಾದ ಅನುಭವ ನೀಡಿತು. ಪುಟಾಣಿ ಅಕ್ಷಯಳ ಏಕಪಾತ್ರಾಭಿನಯ. ಅನಘನ ಭಗವದ್ಗೀತಾ ಪಠಣ, ಕು. ಕವನ ಸಂಗಡಿಗರಿಂದ ಡ್ಯಾನ್ಸ್, ಶ್ರೀ ಲಕ್ಷ್ಮೀಶರ ಹಾಡು, ಡಾ. ಬಿ.ಎಸ್.ಆರ್. ದೀಪಕ್‌ರ ಸಂಗೀತ, ಅನೇಕ ಬಂಧುಗಳು, ವಿಶೇಷವಾಗಿ ಪುಟಾಣಿಗಳು ನಡೆಸಿಕೊಟ್ಟ ವಿವಿಧ ಮನರಂಜನಾ ಕಾರ್ಯಕ್ರಮ ಎಲ್ಲರನ್ನೂ ರಂಜಿಸಿದವು. ಶ್ರೀಮತಿ ಬಿಂದುರಾಘವೇಂದ್ರರವರ ಕಾರ್ಯಕ್ರಮದ ನಿರೂಪಣೆ ಮತ್ತು ನಿರ್ವಹಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಧ್ಯಾಹ್ನದ ಭೋಜನಾನಂತರ ಸಹ ಮನರಂಜನೆ ಕಾರ್ಯಕ್ರಮಗಳು ಮುಂದುವರೆದವು. ವಂದನೆ, ಅಭಿನಂದನೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಾಗ ಎಲ್ಲರೂ ಸ್ಮರಣೀಯ ನೆನಪುಗಳೊಂದಿಗೆ ತಮ್ಮ ತಮ್ಮ ಊರುಗಳಿಗೆ ತೆರಳಿದರೆ ಸಮಾವೇಶಕ್ಕಾಗಿ ಶ್ರಮಿಸಿದವರಲ್ಲಿ ಸಮಾವೇಶ ಸಫಲಗೊಂಡ ಬಗ್ಗೆ ಸಾರ್ಥಕಭಾವ ಮೂಡಿತ್ತು.
ಸ್ಫೂರ್ತಿ ಆತ್ರೇಯ
 ಸುಮಾ ರಾಜೇಶ್


ಲಕ್ಷ್ಮಿಶ್ರೀ ಭಾರದ್ವಾಜ್
ಪಲ್ಲವಿ ಸತ್ಯಪ್ರಸಾದರಿಂದ ಸುಮಧುರ ಹಾಡುಗಳು
ಅಕ್ಷಯ, ಓರ್ವ  ಪುಟಾಣಿ, ಅನಘ, ಡಾ. ದೀಪಕ್.
ಅಂಬಿಕಾ, ಗೋಪಾಲಕೃಷ್ಣ, ಅಕ್ಷಯ, ಲಕ್ಷ್ಮೀಶ



ಇವರುಗಳೇ ಸಕ್ರಿಯರಾಗಿ ಪಾಲುಗೊಂಡು ಸಮಾವೇಶವನ್ನು ಸಾರ್ಥಕಗೊಳಿಸಿದವರು