ಭಾನುವಾರ, ಮೇ 5, 2013

ನಾವು ಇಂತಾ ಮಕ್ಕಳನ್ನೂ ನೋಡಬೇಕು













ತೀರ್ಥಹಳ್ಳಿಯ ಸಮೀಪ ಪಟ್ಲಮನೆಗೆ ನಮ್ಮ ಬಂಧುಗಳ ಮನೆಗೆ ಹೋಗಿದ್ದೆವು. ಅಲ್ಲೇ ಹತ್ತಿರದ " ಚಿಬ್ಬಲಗಟ್ಟೆ" ಎಂಬಲ್ಲಿ ತುಂಗಭದ್ರಾ ನದಿದಂಡೆಯಲ್ಲಿ ನಾಲ್ಕು ಗುಡಿಸಲನ್ನು ನೋಡಿದಾಗ ಅಲ್ಲಿದ್ದ ಮಕ್ಕಳಬಗ್ಗೆ ಕುತೂಹಲ ಉಂಟಾಗಿ ಮಕ್ಕಳೊಡನೆ ಸ್ವಲ್ಪ ಕಾಲ ಕಳೆಯಬೇಕೆನಿಸಿತು. ನದಿಯ ದಂಡೆಯಲ್ಲಿ ಮುಳ್ಳು ಕಲ್ಲುಗಳ ಮಧ್ಯೆ ಈ ಮಕ್ಕಳು ಊಟಮಾಡುತ್ತಿದ್ದ ದೃಶ್ಯ ಕಂಡು ಬೆರಗಾದೆ. ಮಕ್ಕಳನ್ನೂ ಅವರ ತಂದೆ ತಾಯಿಯರನ್ನೂ ಮಾತನಾಡಿಸಿದಾಗ ತಿಳಿದ ವಿಶಯವು ನನ್ನನ್ನು ರೋಮಾಂಚನ ಗೊಳಿಸಿತು. ತರೀಕೆರೆಯಲ್ಲಿ ವಾಸಮಾಡುವ ಇವರ ಮೂಲ ಆಂದ್ರ. ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ. ತರೀಕೆರೆಯಲ್ಲಿ ವ್ಯವಸಾಯ ವೃತ್ತಿ ಮಾಡುವ ಈ ಮಕ್ಕಳ ಪೋಷಕರು ಬೇಸಿಗೆಯಲ್ಲಿ ಇಲ್ಲಿ ಬಂದು ನದಿಯಲ್ಲಿ ಮರಳು ತೆಗೆದು ಲಾರಿಗೆ ಲೋಡ್ ಮಾಡುವ ಕೆಲಸ ಮಾಡುತ್ತಾರೆ. ಒಂದೇ ಕುಟುಂಬದ ಏಳೆಂಟು ಜನರು ಬೆಳಗಿನಿಂದ ಸಂಜೆ ವರಗೆ ಮರಳು ಲೋಡ್ ಮಾಡಿ ದಿನದಲ್ಲಿ ಗಳಿಸುವ ಕೂಲಿ ಎಷ್ಟು ಗೊತ್ತಾ? ಎಂಟರಿಂದ ಹತ್ತು ಸಾವಿರ ರೂಪಾಯಿ!! ಇವರೇನೂ ಮರಳು ದಂಧೆ ಮಾಡುವುದಿಲ್ಲ. ಮಾಡೋರೆಲ್ಲಾ ಉಳ್ಳವರು. ಇವರು ಮಾಡೋದು ಕೂಲಿ. ಹೀಗೇ ಎರಡು ಮೂರು ತಿಂಗಳು ಕೂಲಿ ಮಾಡಿ ಗಳಿಸುವ ಕೂಲಿಯ ಅಂದಾಜು ನಿಮಗೆ ಈಗಾಗಲೇ ಕಲ್ಪನೆಗೆ ಸಿಕ್ಕಿರಬಹುದು. ಮೈ ಮುರಿದು ದುಡಿದರೆ ಬಡತನಕ್ಕೆ ಆಸ್ಪದವೆಲ್ಲಿ? ದುಡಿಯುವಾಗ ಪಡುವ ಶ್ರಮ ಏನೂ ಕಮ್ಮಿ ಇಲ್ಲ. ಆದರೆ ಅಲ್ಲಿದ್ದ ಒಬ್ಬ ವ್ಯಕ್ತಿಯ ಹೊರತಾಗಿ ಯಾರೂ ಮದ್ಯ ಸೇವಿಸುವುದಿಲ್ಲ. ಅಲ್ಲಿದ್ದ ಒಬ್ಬ ಶ್ರಮ ಜೀವಿಯನ್ನು ಮಾತನಾಡಿಸಿದೆ. ಆತನ ಮಗಳು BBM ಮಾಡುತ್ತಿದ್ದಾಳೆ. ಮುಂದೂ ಓದುತ್ತಾಳೆ. ಇಲ್ಲಿರುವ ಒಂದು ಮಗುವನ್ನು ಮಾತನಾಡಿಸಿರುವೆ. ಅದರ ವೀಡಿಯೋ  ನೋಡಿ. ನಿಜವಾಗಿ ಇವರನ್ನು ನೋಡಿದಾಗ ಅವರ ಶ್ರಮದ ದುಡಿಮೆ ಕಂಡು ಅಚ್ಚರಿಯಾಯ್ತು. ಕಷ್ಟಪಟ್ಟರೆ ಫಲ ಉಂಟು ಎಂದು ಉಪದೇಶ ಮಾಡಿದರೆ ಸಾಕೇ? ಇಲ್ಲಿ ಜೀವಂತ ಉಧಾಹರಣೆ ಕಂಡೆ. ಮಕ್ಕಳಿಗೆ ಚಂದ್ರನನ್ನು ತೋರಿಸಿಕೊಂಡು ಊಟಮಾಡಿಸುವ ತಾಯಂದಿರನ್ನು ನೋಡಿರುವ ನಾವು ಇಂತಾ ಮಕ್ಕಳನ್ನೂ ನೋಡಬೇಕು. ನಮ್ಮ ಮಕ್ಕಳಿಗೆ ಇಂತಾ ಮಕ್ಕಳನ್ನೂ ತೋರಿಸಬೇಕು. ಏನಂತೀರಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ